ತ್ರಿಶೂರ್: ಎರ್ನಾಕುಲಂನಿಂದ ಇಲ್ಲಿಗೆ ಬರುತ್ತಿದ್ದ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ಇಬ್ಬರು ಬಾಲಕರು ರೈಲಿನಿಂದ ಇಳಿಯುವಾಗ ಬಿದ್ದು ಮೃತಪಟ್ಟ ಘಟನೆ ಕೊರಟ್ಟಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ರೈಲಿನ ಚಾಲಕರೊಬ್ಬರು ಹಳಿಗಳ ಮೇಲೆ ಬಿದ್ದ ಶವಗಳನ್ನು ಕಂಡು ಚಲಕುಡಿಯ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ ಬಳಿಕ ದುರಂತ ಬೆಳಕಿಗೆ ಬಂತು.
ಈ ಇಬ್ಬರು ಕೊಟ್ಟಪುರಂನಿಂದ ಎರ್ನಾಕುಲಂಗೆ ಆಗಾಗ ಪ್ರಯಾಣಿಸುತ್ತಿದ್ದರು. ಇವರಿಗೆ ಮಾದಕ ದ್ರವ್ಯ ಸೇವನೆಯ ಚಟವೂ ಇತ್ತು ಎನ್ನಲಾಗಿದೆ. ಇವರು ಪ್ರಯಾಣಿಸುತ್ತಿದ್ದ ರೈಲು ಯಾವುದು ಎಂಬುದು ಗೊತ್ತಾಗಿಲ್ಲ. ಈ ರೈಲಿಗೆ ಕೊರಟ್ಟಿ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.