ಕಾಸರಗೋಡು: ಯಾವುದೇ ಭಾಷೆಯೇ ಆಗಲಿ ಮೂಲ ಉದ್ದೇಶ ಸಂವಹನವಾಗಿದೆ. ಭಾಷೆ ಕಲಿಕೆ ವಿಚಾರದಲ್ಲಿ ಕಡ್ಡಾಯ ಹೇರಿಕೆ ಸಲ್ಲದು ಎಂದು ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಶನಿವಾರ ಎಡನೀರು ಮಠದ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೇರಳ ಮತ್ತು ಗೋವಾ ರಾಜ್ಯದ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಡಿನಾಡು ಕಾಸರಗೋಡಿನಲ್ಲಿ ಭಾಷಾ ಬಾಂಧವ್ಯವಿದೆ. ಇಲ್ಲಿನ ಜನತೆ ಕನ್ನಡ, ಮಲಯಾಳ ಎಂಬ ಭೇದವಿಲ್ಲದೆ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಶಾಸಕನ ನೆಲೆಯಲ್ಲಿ ಧ್ವನಿಯೆತ್ತುತ್ತಿದ್ದು, ಇದನ್ನು ಮುಂದುವರಿಸಲಾಗುವುದು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರದ ಕೊಡುಗೆ ಶ್ಲಾಘನೀಯವಾದುದು ಎಂದು ತಿಳಿಸಿದರು.
ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆ ಉಳಿಸುವ ಕೆಲಸ ನಡೆಸುತ್ತಿದ್ದು, ಇಲ್ಲಿನ ಕನ್ನಡಿಗರಲ್ಲಿ ಭಾಷಾಪ್ರೇಮ ಹೆಚ್ಚಿಸುವ ಕೆಲಸ ನಡೆಸುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಇಂದು ಸಂಕಷ್ಟ ಎದುರಿಸುವ ಸ್ಥಿತಿಯಿದೆ. ಕಡ್ಡಾಯ ಮಲಯಾಳ ಹೇರಿಕೆ ಭೀತಿ ಒಂದೆಡೆಯಾದರೆ, ಕೆಲವು ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಆತಂಕದಲ್ಲಿದೆ. ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಂದಿಗೂ ಕೆಡುಕುಂಟಾಗದು. ಕಾಸರಗೋಡಿನ ಕನ್ನಡಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದು, ಇವರಲ್ಲಿ ಕಡ್ಡಾಯ ಮಲಯಾಳ ಹೇರಿಕೆ ಭಂಡತನವಾಗಲಿದೆ. ಕಾಸರಗೋಡಿನಲ್ಲಿ ಕನ್ನಡ ಚಟುವಟಿಕೆ ಸಜೀವವಾಗಿರಿಸುವಲ್ಲಿ ಕನ್ನಡ ಅಭಿವೃದ್ಧಿ ಪ್ರಧಿಕಾರದ ಕೊಡುಗೆ ಶ್ಲಾಘನೀಯವಾದುದು ಎಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಗೌರವಕಾರ್ಯದರ್ಶಿ ವ.ಚ ಚನ್ನೇಗೌಡ ಪ್ರಶಸ್ತಿ ಪ್ರದಾನ ಕಾರ್ಯ ನಡೆಸಿಕೊಟ್ಟರು. ಬಹುಭಾಷಾ ತಜ್ಞ ಪ್ರೊ. ಪಿ.ಎನ್ ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಪೆರಿಯ ಕೇಂದ್ರೀಯ ವಿಶ್ವ ವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸೌಮ್ಯಾ ಎಚ್, ಮಂಗಳೂರು ಹಂಪನಕಟ್ಟೆ ವಿವಿ ಕಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸುಜಾತಾ ಎಸ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಖ್ಯಾತ ಹಾಡುಗಾರ ಗೋ.ನ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಕನ್ನಡ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಜರುಗಿತು. ಎಸ್ಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾಸರಗೋಡು ಜಿಲ್ಲೆಯ 214 ಹಾಗೂ ಗೋವಾ ರಾಜ್ಯದ ಆರು ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಸ್ಮರಣಿಕೆ, ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ 12ಸಾವಿರ, ದ್ವಿತೀಯ 11ಸಾವಿರ ಹಾಗೂ ತೃತೀಯ 10ಸಾವಿರ ರೂ. ನಗದು ಬಹುಮಾನ ನೀಡಲಾಯಿತು.