ಉತ್ತರಪ್ರದೇಶ: ಕ್ಷುಲ್ಲಕ ಕಾರಣಕ್ಕೆ ಅಕ್ಕ-ಪಕ್ಕದ ಮನೆಮಂದಿಗೆ ಜಗಳ ಆಗುತ್ತಲೇ ಇರುತ್ತದೆ. ಕೆಲವೊಂದು ಬಾರಿ ಪೊಲೀಸರು ಮಧ್ಯಪ್ರವೇಶಿಸಿ ಜಗಳ ಬಿಡಿಸಬೇಕಾದಂತಹ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಇದೀಗ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅಕ್ಕ-ಪಕ್ಕದ ಮನೆಯವರ ನಡುವೆ ಜಗಳ ಏರ್ಪಟ್ಟಿದೆ.
ಇದಕ್ಕೆ ಕಾರಣವೇನೆಂದರೆ ಕೋಳಿ ಮತ್ತು ಬೆಕ್ಕು!
ಹೌದು, ಬರೇಲಿ ಜಿಲ್ಲೆಯ ಮೋಹನಪುರ ಗ್ರಾಮದ ನಿವಾಸಿ ಫರೀದಾ ತನ್ನ ಮನೆಯ ವಠಾರದಲ್ಲಿ ಕೋಳಿಗಳನ್ನು ಸಾಕಿದ್ದರು. ಅದೊಂದು ದಿನ ನೆರೆ ಮನೆಯಲ್ಲಿ ವಾಸವಾಗಿದ್ದ ನದೀಮ್ ಎಂಬುವವರು ಸಾಕಿದ್ದ ಬೆಕ್ಕು, ಫರೀದಾ ಅವರಿಗೆ ಸೇರಿದ ಕೋಳಿಯೊಂದನ್ನು ತಿಂದಿದೆ. ಇದು ಫರೀದಾ ಮತ್ತು ನದೀಮ್ ಅವರ ನಡುವೆ ಜಗಳಕ್ಕೆ ಕಾರಣವಾಗಿದೆ.
ಫರೀದಾ ತನ್ನ ಕೋಳಿಯನ್ನು ಬೆಕ್ಕು ತಿಂದೆದೆ ಎಂದು ಆರೋಪಿಸುತ್ತಿದ್ದಂತೆ ನದೀಮ್, ಆತನ ತಾಯಿ ಇನ್ನಾ, ಸಹೋದರಿಯರಾದ ಶಂಶುಲ್, ಶಬ್ನಮ್, ಶಾಬು ಮತ್ತು ಶಮಾ ಒಟ್ಟಾಗಿ ಸೇರಿಕೊಂಡು ಕೋಳಿ ಸಾಕಿದ್ದ ಮಹಿಳೆ ಫರೀದಾ ಜತೆಗೆ ಜಗಳವಾಡಿದ್ದಾರೆ. ಇದಾಗುತ್ತಿದ್ದಂತೆ ಫರೀದಾ ನೇರವಾಗಿ ಬರೇಲಿಯ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ಕೇಳಿದ್ದಾರೆ.
ನದೀಮ್ ಸಾಕಿದ ಬೆಕ್ಕು ನನ್ನ ಕೋಳಿಯನ್ನು ತಿಂದಿದೆ. ಇದಾಗುತ್ತಿದ್ದಂತೆ ಆತನ ಮನೆಯವರು ಜಗಳವಾಡಿದ್ದಾರೆ. ನನ್ನ ಮಕ್ಕಳಾದ ಮುಜಾಹಿದ್ ಮತ್ತು ಶಾದಿಯಾ ಅವರನ್ನು ನಿಂದಿಸಿ, ಥಳಿಸಿದ್ದಾರೆ. ಜಗಳದಲ್ಲಿ ನನ್ನ ಸರ ಹಾಗೂ ಉಂಗುರ ಕಾಣೆಯಾಗಿದೆ ಫರಿದಾ ಆರೋಪಿಸಿದ್ದಾರೆ.
ಫರೀದಾ ನೀಡಿದ ದೂರಿನ ಆಧಾರದಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಯಾಂಟ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಲ್ವೀರ್ ಸಿಂಗ್ ತಿಳಿಸಿದ್ದಾರೆ.