ನವದೆಹಲಿ: ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಮತ್ತು ಎತ್ತಿನ ಬಂಡಿ ರೇಸ್‌ಗೆ ಅನುಮತಿ ನೀಡುವ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರದ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆಯಷ್ಟೇ ಅಲ್ಲದೆ, ಸಂಕ್ರಾಂತಿ ಹಬ್ಬದಂದು ಮಾಡುವ ಸಾಂಸ್ಕೃತಿಕ ಆಚರಣೆಯೂ ಕೂಡ. ಇದು ಗೂಳಿ ಪಳಗಿಸುವ ಕ್ರೀಡೆಯಾಗಿದೆ.
ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತಮಿಳುನಾಡು ಪರ ಹಾಜರಾದ ಮುಕುಲ್ ರೋಹಟಗಿ ಸೇರಿದಂತೆ ಹಿರಿಯ ವಕೀಲರು ಮತ್ತು ಮಧ್ಯಸ್ಥಗಾರರನ್ನು ಪ್ರತಿನಿಧಿಸುವ ಹಲವಾರು ಇತರ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿತು.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ, ಒಂದು ವಾರದೊಳಗೆ ಎಲ್ಲಾ ಕಕ್ಷಿದಾರರೂ ಸಾಮೂಹಿಕ ಲಿಖಿತ ದಾಖಲೆಗಳನ್ನು ಸಲ್ಲಿಸಬೇಕೆಂದು ಸೂಚಿಸಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯ್ದೆ, 2017 ಅನ್ನು ಪ್ರಶ್ನಿಸುವ ಅರ್ಜಿಗಳು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವ ಕಾರಣ ದೊಡ್ಡ ಪೀಠದಿಂದ ತೀರ್ಮಾನಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು. ದೊಡ್ಡ ಪೀಠದಿಂದ ನಿರ್ಣಯಿಸಬೇಕಾದ ಐದು ಪ್ರಶ್ನೆಗಳನ್ನು ಪೀಠ ರೂಪಿಸಿದೆ.
ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ಕ್ರೀಡೆಗೆ ಅನುಮತಿ ನೀಡಿದ ರಾಜ್ಯದ ಕಾನೂನನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಸ್ಥೆ PETA ಸಲ್ಲಿಸಿದ ಅರ್ಜಿಗಳು ಸೇರಿದಂತೆ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ.