ಕೊಚ್ಚಿನ್: ಮಲಪ್ಪುರಂನಿಂದ 10 ದಿನಗಳ ಹಿಂದೆ ಶಬರಿಮಲೆಗೆ ವ್ಹೀಲ್‍ಚೇರ್ ಯಾತ್ರೆ ಆರಂಭಿಸಿದ ಅಮಂಗಟ್ಟುಚಲೀಲ್ ಕಣ್ಣನ್ ತಮ್ಮ 300 ಕಿಲೋಮೀಟರ್ ನ ಕಠಿಣ ಯಾತ್ರೆಯನ್ನು ಪೂರೈಸುವ ದೃಢಸಂಕಲ್ಪ ಹೊಂದಿದ್ದಾರೆ.
ಹಲವು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತಮ್ಮ ಎಡಗಾಲು ಕಳೆದುಕೊಂಡಿದ್ದ ಕಣ್ಣನ್ ಅವರ ಮತ್ತೊಂದು ಕಾಲು ಭಾಗಶಃ ಪಾರ್ಶ್ವ ವಾಯುಪೀಡಿತವಾಗಿದೆ.
ಇವರ ಈ ಯಾತ್ರೆಯ ಉದ್ದೇಶ, ಭವಿಷ್ಯದ ಬಗ್ಗೆ ನಿರಾಶರಾಗಿದ್ದ ಸಂದರ್ಭದಲ್ಲಿ ತನಗೆ ಸೂರು ಕಟ್ಟಿಕೊಳ್ಳಲು ನೆರವಾದ ಶಿಕ್ಷಕಿಗೆ ಅಯ್ಯಪ್ಪನ ಅನುಗ್ರಹ ದೊರಕಿಸಿಕೊಡುವುದು ಆಗಿದೆ.
2013ರ ಡಿಸೆಂಬರ್ 3ರಂದು ಕಣ್ಣನ್ ಲಾರಿಗೆ ಮರದ ದಿಮ್ಮಿ ಹೇರುವಾಗ ಎಡಗಾಲು ಕಳೆದುಕೊಂಡಿದ್ದರು. ಮೂವರು ಪುತ್ರಿಯರು ಹಾಗೂ ಮಗನನ್ನು ಹೊಂದಿದ ಕುಟುಂಬವನ್ನು ನಿಭಾಯಿಸುವುದು ಈ ದಿನಗೂಲಿ ಕಾರ್ಮಿಕನಿಗೆ ಸವಾಲಾಯಿತು ಕೊಂಡೊಟ್ಟಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್ ಹಾಗೂ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಂಯೋಜಕಿ ಎಂ.ಪಿ.ಸಮೀರಾ ಅವರು ಕಣ್ಣನ್ ಅವರ ಸಂಕಷ್ಟಕ್ಕೆ ಸ್ಪಂದಿಸಿ ಅವರಿಗಾಗಿ ಎನ್‍ಎಸ್‍ಎಸ್ ಘಟಕದ ಮೂಲಕ ಮನೆ ಕಟ್ಟಿಸಿಕೊಟ್ಟರು.
"ಸಮೀರಾ ನನ್ನ ಬದುಕು ಬದಲಿಸಿದ ಶಿಕ್ಷಕಿ. ನನಗೆ ಹಾಗೂ ನನ್ನ ಕುಟುಂಬಕ್ಕೆ ದೇವರ ಸಮಾನ. ನಾನು ಅಯ್ಯಪ್ಪನ ಭಕ್ತ. ಈ ಯಾತ್ರೆ ಸಮೀರಾ ಟೀಚರ್‍ಗಾಗಿ. ನಾನು ಶಬರಿಮಲೆಯಲ್ಲಿ ದೇವರಿಗೆ ಪ್ರಾಮಾಣಿಕ ಪ್ರಾರ್ಥನೆ ಸಲ್ಲಿಸಿದರೆ ಸ್ವಾಮಿ ಅಯ್ಯಪ್ಪ, ಸಮೀರಾ ಟೀಚರ್ ಅವರನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ನನ್ನದು" ಎಂದು ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಕೊಚ್ಚಿನ್‍ಗೆ ಆಗಮಿಸಿದ ಕಣ್ಣನ್ ತಮ್ಮ ಯಾತ್ರೆಯ ಉದ್ದೇಶ ವಿವರಿಸಿದರು.
ಮಲಪ್ಪುರಂ ಜಿಲ್ಲೆಯ ತಡಪ್ಪರಂಬ ಗ್ರಾಮದಿಂದ ಶಬರಿಮಲೆಗೆ ಯಾತ್ರೆ ಕೈಗೊಂಡಿರುವ ಕಣ್ಣನ್ ಡಿಸೆಂಬರ್ 15ರಂದು 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. "ಸಾಮಾನ್ಯವಾಗಿ ಬೆಳಿಗ್ಗೆ 6ಕ್ಕೆ ಯಾತ್ರೆ ಆರಂಭಿಸುತ್ತೇನೆ, ಮಧ್ಯಾಹ್ನವರೆಗೆ ಮುಂದುವರಿಸುತ್ತೇನೆ. ಯಾವುದಾದರೂ ದೇವಾಲಯ ಅಥವಾ ಶಬರಿಮಲೆ ಯಾತ್ರಿಕರ ಅನ್ನದಾನ ಕೌಂಟರ್ ನಲ್ಲಿ ಮಧ್ಯಾಹ್ನದೂಟ ಪೂರೈಸಿ ಸ್ವಲ್ಪ ನಿದ್ದೆ ಮಾಡುತ್ತೇಣೆ. ಸಂಜೆ 6ರಿಂದ 11ರವರೆಗೆ ಮತ್ತೆ ಯಾತ್ರೆ ಮುಂದುವರಿಯುತ್ತದೆ. ದೇವಾಲಯಗಳಲ್ಲಿ ರಾತ್ರಿ ನಿದ್ದೆ ಮಾಡುತ್ತೇನೆ" ಎಂದು ಕಣ್ಣನ್ ಹೇಳಿದರು. ಸುಮಾರು 40 ವರ್ಷ ಹಿಂದೆ ಇವರು ತಮಿಳುನಾಡಿನಿಂದ ಕೇರಳಕ್ಕೆ ವಲಸೆ ಬಂದಿದ್ದಾರೆ.
ಜನವರಿ ಮೊದಲ ವಾರ ಪಂಬಾ ತಲುಪಿದ ಬಳಿಕ ಕಾಲ್ನಡಿಗೆಯಲ್ಲಿ ಬೆಟ್ಟ ಏರುವ ಉದ್ದೇಶ ಅವರದ್ದು.