ತಿರುವನಂತಪುರಂ: ಪೋಕ್ಸೊ ಆರೋಪಿ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಕೇರಳದ ಆಯಿರೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಅಧಿಕಾರಿಯನ್ನು ಮಾಜಿ ಆಯಿರೂರು ಸರ್ಕಲ್ ಇನ್ಸ್ಪೆಕ್ಟರ್ ಜಯಸನೀಲ್ ಎಂದು ಗುರುತಿಸಲಾಗಿದೆ.ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಯಸನೀಲ್ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.
27 ವರ್ಷದ ಪೋಕ್ಸೊ ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನ್ನನ್ನು ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆಗೆ ಬಳಸಿಕೊಂಡರು ಎಂದು ಸಂತ್ರಸ್ತ ಆರೋಪ ಮಾಡಿದ್ದಾನೆ. ಪೋಕ್ಸೊ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿಯು ನ್ಯಾಯಾಲಯದ ಮುಂದೆ ನಡೆದ ಘಟನೆಯ ಬಗ್ಗೆ ಬಹಿರಂಗಪಡಿಸಿದ್ದಾನೆ. ಜಾಮೀನು ಪಡೆದ ಕೂಡಲೇ ಯುವಕ ಅಯಿರೂರು ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪೋಕ್ಸೊ ಪ್ರಕರಣದಲ್ಲಿ ಬಂಧಿಸಲು ಆರೋಪಿ ಮನೆಗೆ ಸರ್ಕಲ್ ಇನ್ಸ್ಪೆಕ್ಟರ್ ತೆರಳಿದಾಗ ಅಲ್ಲಿಯೇ ಆರೋಪಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪೋಕ್ಸೊ ಪ್ರಕರಣ ಮುಚ್ಚಿ ಹಾಕಲು 50 ಸಾವಿರ ರೂ. ಲಂಚ ಪಡೆದಿದ್ದಾಗಿ ಯುವಕ ದೂರಿನಲ್ಲಿ ಆರೋಪ ಮಾಡಿದ್ದಾನೆ.
ಪೋಕ್ಸೊ ಪ್ರಕರಣದ ಮತ್ತೊಬ್ಬ ಆರೋಪಿಯಿಂದ ಲಂಚ ಸ್ವೀಕರಿಸಿ, ಆತನನ್ನು ಸುಳ್ಳು ಪ್ರಕರಣದಡಿಯಲ್ಲಿ ಸಿಲುಕಿಸಿದ ಆರೋಪದಡಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ನನ್ನು ಪ್ರಸ್ತುತ ಅಮಾನತಿನಲ್ಲಿ ಇರಿಸಲಾಗಿದೆ.