ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಕೊನೆಗೂ ಮಹತ್ವದ ಸಾಕ್ಷ್ಯಾಧಾರ ಪೊಲೀಸರಿಗೆ ಲಭಿಸಿದೆ. ಆರೋಪಿ ಅಫ್ತಾಬ್ ಪೂನಾವಾಲಾ ನೀಡಿದ್ದ ಮಾಹಿತಿಯ ಮೇರೆಗೆ ದಿಲ್ಲಿಯ ಮೆಹ್ರೌಲಿ ಪ್ರದೇಶದಲ್ಲಿಯ ಅರಣ್ಯದಿಂದ ಮತ್ತು ಗುರುಗ್ರಾಮದಿಂದ ಪೊಲೀಸರು ವಶಪಡಿಸಿಕೊಂಡ ಮೂಳೆಗಳು ಶ್ರದ್ಧಾಳದೇ ಆಗಿವೆ ಎನ್ನುವುದನ್ನು ಡಿಎನ್‌ಎ ಪರೀಕ್ಷೆಯು ದೃಢಪಡಿಸಿದೆ.
ಪೂನಾವಾಲಾನ ಫ್ಲ್ಯಾಟ್ನಲ್ಲಿ ಪತ್ತೆಯಾಗಿದ್ದ ರಕ್ತದ ಕಲೆಗಳೂ ಶ್ರದ್ಧಾಳದೇ ಆಗಿವೆ ಎನ್ನುವುದನ್ನು ಆಕೆಯ ತಂದೆಯ ರಕ್ತದ ಡಿಎನ್‌ಎ ಸ್ಯಾಂಪಲ್ಗಳನ್ನು ಬಳಸಿ ನಡೆಸಿದ ಪರೀಕ್ಷಾ ವರದಿಯು ತಿಳಿಸಿದೆ.
ಪೂನಾವಾಲಾನ ಬಂಧನದ ಒಂದು ತಿಂಗಳ ಬಳಿಕ ಪ್ರಮುಖ ಸಾಕ್ಷ್ಯ ಪೊಲೀಸರ ಕೈಸೇರಿದೆ.
ಶ್ರದ್ಧಾಳೊಂದಿಗೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದ ಪೂನಾವಾಲಾ ಮೇ 18ರಂದು ಆಕೆಯ ಹತ್ಯೆ ಮಾಡಿದ ಬಳಿಕ ಶವವನ್ನು 35 ತುಂಡುಗಳನ್ನಾಗಿಸಿದ್ದ. ಅವುಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಆತ ಅವುಗಳನ್ನು ಮುಂದಿನ 18 ದಿನಗಳ ಕಾಲ ತನ್ನ ಬಾಡಿಗೆ ಫ್ಲ್ಯಾಟ್ ಸಮೀಪದ ಮೆಹ್ರೌಲಿ ಅರಣ್ಯದ ವಿವಿಧೆಡೆಗಳಲ್ಲಿ ಎಸೆದಿದ್ದ. ಅಕ್ಟೋಬರ್ನಲ್ಲಿ ಶ್ರದ್ಧಾಳ ತಂದೆ ವಿಕಾಸ ವಾಲ್ಕರ್ ಮಹಾರಾಷ್ಟ್ರದ ತನ್ನೂರಿನ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಕ್ರಮೇಣ ಹತ್ಯೆ ವಿಷಯವು ಬೆಳಕಿಗೆ ಬಂದಿತ್ತು.
ಈವರೆಗೆ ಪೊಲೀಸರು ಪೂನಾವಾಲಾ ಬಳಸಿದ್ದ ಕೆಲವು ಚಾಕುಗಳನ್ನು ವಶಪಡಿಸಿಕೊಂಡಿದ್ದರು. ಆತ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾನಾದರೂ ಅದು ಪ್ರಮುಖ ಸಾಕ್ಷ್ಯವಾಗುವುದಿಲ್ಲ. ಆದಾಗ್ಯೂ ಈ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ವಶಪಡಿಸಿಕೊಳ್ಳಲಾಗಿರುವ ವಸ್ತುಗಳನ್ನು ಕೊಲೆಯ ಮುನ್ನ ಮತ್ತು ನಂತರದ ಘಟನಾವಳಿಗಳ ಮರುಸೃಷ್ಟಿಗೆ ಸಾಕ್ಷ್ಯವನ್ನಾಗಿ ಮಂಡಿಸಬಹುದಾಗಿದೆ. ಪೂನಾವಾಲಾನನ್ನು ಪೊಲೀಸರು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಿದ್ದರು.
ಪೂನಾವಾಲಾ ಜೊತೆಗೆ ಶ್ರದ್ಧಾಳ ಅಂತರಧರ್ಮೀಯ ಸಂಬಂಧದಿಂದಾಗಿ ಅಸಮಾಧಾನಗೊಂಡಿದ್ದ ವಿಕಾಸ ವಾಲ್ಕರ್ ಪುತ್ರಿಯ ಸಂಪರ್ಕದಲ್ಲಿರಲಿಲ್ಲ. ಡೇಟಿಂಗ್ ಆಯಪ್ವೊಂದರಲ್ಲಿ ಭೇಟಿಯಾಗಿದ್ದ ಶ್ರದ್ಧಾ ಮತ್ತು ಪೂನಾವಾಲಾ ಈ ವರ್ಷದ ಮೇ ತಿಂಗಳಿನಲ್ಲಿ ದಿಲ್ಲಿಗೆ ಆಗಮಿಸುವ ಮುನ್ನ ತಮ್ಮ ಹುಟ್ಟೂರು,ಮುಂಬೈ ಸಮೀಪದ ವಾಶಿಯಲ್ಲಿ ಕೆಲಕಾಲ ಒಟ್ಟಿಗೆ ವಾಸವಾಗಿದ್ದರು.