ನವದೆಹಲಿ : ಭಾರತದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MNREGA) ಉದ್ಯೋಗಕ್ಕಾಗಿನ ಬೇಡಿಕೆ ಕುಸಿಯುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಲೋಕಸಭೆಗೆ ಗುರುವಾರ ತಿಳಿಸಿದರು.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಕ್ಕಾಗಿನ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗಿದೆ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಉಲ್ಲೇಖಿಸಿ ಹೇಳಿದರು. ನರೇಗಾ ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಅದೀಗ ಇಳಿಕೆಯಾಗುತ್ತಿದೆ ಎಂದೂ ತಿಳಿಸಿದರು.
ಹೀಗಿದ್ದೂ ಮುಂದಿನ ಮಾರ್ಚ್ 31ಕ್ಕೆ ಕೊನೆಯಾಗಲಿರುವ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ 730 ಶತಕೋಟಿ ರೂಪಾಯಿ ನಿಗದಿಯಾಗಿದ್ದು, ಹೆಚ್ಚುವರಿ 164 ಶತಕೋಟಿ ರೂಪಾಯಿ ಒದಗಿಸುವಂತೆ ಸರ್ಕಾರದೆದುರು ಬೇಡಿಕೆ ಮಂಡಿಸಲಾಗಿದೆ.
ಸುಮಾರು 15 ವರ್ಷಗಳಷ್ಟು ಹಿಂದೆ ಜಾರಿಯಾಗಿರುವ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ನಿರ್ಮಾಣ, ಬಾವಿ ಕೊರೆತ ಅಥವಾ ಇನ್ನಿತರ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿ ಪ್ರಜೆಗೂ ನೋಂದಾಯಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಯೋಜನೆಯಡಿ ನೋಂದಾಯಿತಗೊಂಡ ಪ್ರತಿ ವ್ಯಕ್ತಿಯೂ ಕನಿಷ್ಠ ನೂರು ದಿನಗಳ ಉದ್ಯೋಗ ಪಡೆಯಲಿದ್ದು, ಅದಕ್ಕಾಗಿ ನಿಗದಿಪಡಿಸಲಾಗಿರುವ ಕನಿಷ್ಠ ವೇತನವನ್ನು ಪಡೆಯಲು ಅರ್ಹನಾಗಿರುತ್ತಾನೆ.