ನವದೆಹಲಿ: ಕಾನೂನನ್ನು ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಕಿರುಕುಳ ನೀಡುವ ಸಾಧನವಾಗಿ ಬಳಸಬಾರದು ಮತ್ತು ಕ್ಷುಲ್ಲಕ ಪ್ರಕರಣಗಳು ಕಾನೂನಿನ ಪವಿತ್ರ ಸ್ವರೂಪಕ್ಕೆ ಚ್ಯುತಿ ತರುತ್ತಿಲ್ಲವೆಂಬುದನ್ನು ನ್ಯಾಯಾಲಯಗಳು ಯಾವಾಗಲೂ ಖಾತ್ರಿಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಇಬ್ಬರು ವ್ಯಕ್ತಿಗಳ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್.ಆರ್. ಭಟ್ ಅವರಿದ್ದ ಪೀಠವು, ಕಾನೂನು ಅಸ್ತಿತ್ವದಲ್ಲಿರುವುದು ಮುಗ್ಧರನ್ನು ಬೆದರಿಸಲು ಖಡ್ಗವಾಗಿ ಬಳಸುವುದಕ್ಕಿಂತ ಹೆಚ್ಚಾಗಿ ರಕ್ಷಿಸುವ ಗುರಾಣಿಯಂತೆ ಪ್ರಯೋಗಿಸಲು ಎಂದು ಹೇಳಿದೆ.
ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಉಲ್ಲಂಘನೆಯಡಿ ದಾಖಲಾಗಿದ್ದ ಕ್ರಿಮಿನಲ್ ದೂರು ಕೈಬಿಡುವಂತೆ ಕೋರಿದ್ದ ಅರ್ಜಿಯನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠವು ಇತ್ತೀಚೆಗೆ ಆಲಿಸಿತು.
ಮದ್ರಾಸ್ ಹೈಕೋರ್ಟ್ ತೀರ್ಪು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಪ್ರಕರಣದ ಸನ್ನಿವೇಶ ಮತ್ತು ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ಅಧೀನ ನ್ಯಾಯಾಲಯ ವಿಫಲವಾಗಿದೆ. ದೂರು ಸಲ್ಲಿಕೆ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಯಾವಾಗಲೂ ನ್ಯಾಯದ ಉದ್ದೇಶವನ್ನು ಎತ್ತಿ ಹಿಡಿಯುವಂತಿರಬೇಕು ಎಂದೂ ಅದು ಹೇಳಿದೆ.
ದೂರು ದಾಖಲಾದ ಮತ್ತು ಪ್ರಾಥಮಿಕ ತನಿಖೆ ಆರಂಭಿಸಿದ ಅವಧಿಯ ಅಂತರ ನಾಲ್ಕು ವರ್ಷಗಳಿಗೂ ಹೆಚ್ಚು ಇದ್ದಿದ್ದನ್ನು ಗಮನಿಸಿದ ಪೀಠ, ತೀರ್ಪು ವಜಾಕ್ಕೆ ವಿಳಂಬ ಒಂದು ಕಾರಣವಾಗಿ ಪರಿಗಣನೆಯಾಗದಿದ್ದರೂ ಇಷ್ಟೊಂದು ವಿಳಂಬಕ್ಕೆ ಸೂಕ್ತ ಕಾರಣಗಳನ್ನೂ ವಿವರಿಸಿಲ್ಲದಿರುವುದು ಮತ್ತು ದೂರು ಸಾಬೀತುಪಡಿಸಲು ಪೂರಕ ಸಾಕ್ಷ್ಯಗಳನ್ನೂ ಒದಗಿಸಿಲ್ಲದಿರುವುದಕ್ಕೆ ವಜಾಗೊಳಿಸಿದ್ದಾಗಿ ಡಿ.16ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.
ಡ್ರಗ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಉಲ್ಲಂಘಿಸಿ ಪಿರಿಡಾಕ್ಸಲ್ -5-ಫಾಸ್ಫೇಟ್ ಸಗಟು ಖರೀದಿಸಿದ ಆರೋಪದ ಮೇಲೆ ಮೇಯರ್ಸ್ ಕೆಮ್ ಫಾರ್ಮಾ ಪ್ರವರ್ತಕ, ಆಹಾರ, ಪೂರಕ ಆಹಾರ ಹಾಗೂ ಔಷಧ ತಯಾರಿಕೆಗಳಲ್ಲಿ ಬಳಸುವ ಕಚ್ಚಾ ವಸ್ತು ರಾಸಾಯನಿಕಗಳ ವ್ಯಾಪಾರಿ ಹಸ್ಮುಖ್‌ಲಾಲ್ ಡಿ. ವೊರಾ ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಇವುಗಳ ಸಿಂಧುತ್ವವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇವರ ವಿರುದ್ಧ ದೂರು ದಾಖಲಿಸಿದ್ದ ಡ್ರಗ್ ಇನ್ಸ್‌ಪೆಕ್ಟರ್ ದೂರು ಸಾಬೀತಿಗೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿಲ್ಲ. ಔಷಧ ಖರೀದಿಗೆ ನಿರ್ದಿಷ್ಟ ಪರವಾನಗಿ ಅಗತ್ಯವಿದೆ ಎಂಬ ವಾದ ಸಮರ್ಥಿಸಿಕೊಳ್ಳಲು ಯಾವುದೇ ಪುರಾವೆ ಒದಗಿಸಿಲ್ಲ ಎಂದೂ ಪೀಠ ಹೇಳಿದೆ.