ವಾಷಿಂಗ್ಟನ್: 'ಭಾರತವು ನನ್ನ ಭಾಗವಾಗಿದೆ, ಅದನ್ನು ನಾನು ಹೋಗುವಲ್ಲಿಗೆಲ್ಲಾ ನನ್ನೊಂದಿದೆ ಕೊಂಡೊಯ್ಯುತ್ತೇನೆ' ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಂದ ನಿನ್ನೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿ ಹೀಗೆ ಹೇಳಿದ್ದಾರೆ.
ಭಾರತೀಯ ಮೂಲದ ಅಮೆರಿಕನ್ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆ, ಸೇವೆಗಾಗಿ ಕೇಂದ್ರ ಸರ್ಕಾರ 2022 ರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಮಧುರೈ ಮೂಲದ ಪಿಚೈ ಅವರು ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು. ಸಮಾರಂಭಕ್ಕೆ ಅವರು ಬಂದಿರಲಿಲ್ಲ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅವರು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಅಗಾಧವಾದ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನತೆಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶವು ಈ ರೀತಿಯಲ್ಲಿ ಗೌರವಿಸಿರುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ ಎಂದು 50 ವರ್ಷದ ಪಿಚೈ ಹೇಳಿದ್ದಾರೆ.
ಭಾರತ ದೇಶವು ನನ್ನ ಭಾಗವಾಗಿದೆ. ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನಗೆ ಅವಕಾಶಗಳನ್ನು ತೋರಿಸಿಕೊಡಲು ಬಹಳಷ್ಟು ತ್ಯಾಗ ಮಾಡಿದ ಪೋಷಕರೊಂದಿಗೆ ಕಲಿಕೆ ಮತ್ತು ಜ್ಞಾನವನ್ನು ಪಾಲಿಸುವ ಕುಟುಂಬದಲ್ಲಿ ಬೆಳೆಯಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಟಿ ವಿ ನಾಗೇಂದ್ರ ಪ್ರಸಾದ್ ಕೂಡ ಉಪಸ್ಥಿತರಿದ್ದರು. ಪರಿವರ್ತನೆಗಾಗಿ ತಂತ್ರಜ್ಞಾನದ ಮಿತಿಯಿಲ್ಲದ ಸಾಧ್ಯತೆಗಳನ್ನು ಪಿಚೈ ಪ್ರತಿನಿಧಿಸಿದ್ದಾರೆ ಎಂದು ಸಂಧು ಹೇಳಿದರು.