ನವದೆಹಲಿ: ಭಾರತದ ಇತಿಹಾಸವನ್ನು 'ಸರಿಪಡಿಸಿದ' ರೂಪದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.
ಸಚಿವರ ಹೇಳಿಕೆಗೆ ಪೂರಕವಾದ ಕೆಲಸಗಳು ಆರಂಭವಾಗಿವೆ ಎಂದು ಭಾರತೀಯ ಐತಿಹಾಸಿಕ ಸಂಶೋಧನಾ ಸಂಸ್ಥೆಯ (ಐಸಿಎಚ್‌ಆರ್) ಸದಸ್ಯ ಕಾರ್ಯದರ್ಶಿ ಉಮೇಶ್ ಅಶೋಕ್ ಕದಂ ಅವರು ಬುಧವಾರ ಹೇಳಿದ್ದಾರೆ.
ಐಸಿಎಚ್‌ಆರ್ ಹಾಗೂ ಆರ್‌ಎಸ್‌ಎಸ್‌ನ ಅಂಗಸಂಸ್ಥೆ 'ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ್ದ ಪ್ರಧಾನ್, 'ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಸಿದ್ಧಪಡಿಸಲಾಗುವ ಸಮಗ್ರ ಇತಿಹಾಸ ಆವೃತ್ತಿಯು ಮುಂದಿನ ಮಾರ್ಚ್ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಿಗಲಿದೆ. ಈ ಪುಸ್ತಕಗಳು ಜಗತ್ತಿಗೆ ಭಾರತದ ನೈಜ ಚಿತ್ರಣವನ್ನು ನೀಡಲಿವೆ' ಎಂದು ಹೇಳಿದ್ದರು.
'ದೇಶೀಯ ಮೂಲಗಳ ಮಾಹಿತಿ ಆಧರಿಸಿದ ಸಮಗ್ರ ರೂಪದಲ್ಲಿ ಪುಸ್ತಕಗಳು ತಯಾರಾಗಲಿವೆ. ಭಾರತದ ಆರ್ಥಿಕ ಇತಿಹಾಸವನ್ನು ಹೇಳುವ ಪುಸ್ತಕವೂ ಹೊರಬರಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತದ ಕೊಡುಗೆಯನ್ನು ಪ್ರಚಾರ ಮಾಡಲು ಇಸ್ರೊ ಜೊತೆಗಿನ ಯೋಜನೆಯೂ ಇದೆ. ಈ ಪುಸ್ತಕಗಳು ನಮ್ಮ ಜ್ಞಾನಕ್ಕೆ ಹೊಸ ಹೊಳಹು ನೀಡಲಿವೆ. ಅದು ಐರೋಪ್ಯ ಕೇಂದ್ರಿತ ಅಥವಾ ಮೊಘಲ್ ಇತಿಹಾಸ ಪ್ರಭಾವಿತ ದೃಷ್ಟಿಕೋನದ ಹೊರಗೆ ದೃಷ್ಟಿ ಹಾಯಿಸುತ್ತದೆ' ಎಂದು ಕದಂ ಹೇಳಿದ್ದಾರೆ.