ನವದೆಹಲಿ: ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಗೃಹ ಸಚಿವ ಅಮಿತ್ ಶಾ, ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಇತರ ಹಿರಿಯ ಅಧಿಕಾರಿಗಳು ವರ್ಚ್ಯುವಲ್ ಸಭೆಯಲ್ಲಿ ಭಾಗಿಯಾದರು.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳು ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಮತ್ತು ಸಿದ್ಧತೆ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೋವಿಡ್ ಕುರಿತು ಎಚ್ಚರಿಕೆ ವಹಿಸಲು ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಕುರಿತು ಜಾಗೃತಿ ಮೂಡಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಹಬ್ಬಗಳು ಮತ್ತು ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಆರೋಗ್ಯ ಸಚಿವ ಮಾಂಡವೀಯ ಲಿಖಿತ ರೂಪದಲ್ಲಿ ಲೋಕಸಭೆಗೆ ತಿಳಿಸಿದ್ದರು.
ಬುಧವಾರ ಕೋವಿಡ್ ಸ್ಥಿತಿ ಪರಿಶೀಲನೆ ನಡೆಸಿದ ಮನ್ಸುಖ್ ಮಾಂಡವೀಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಲಹೆ ನೀಡಿದ್ದರು.
ಚೀನಾ ಸೇರಿದಂತೆ ಇತರೆ ದೇಶಗಳಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಕಣ್ಗಾವಲು ಹೆಚ್ಚಿಸಲು ಹಾಗೂ ಲಸಿಕೀಕರಣಕ್ಕೆ ಒತ್ತು ನೀಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸೂಚಿಸಿತ್ತು.