ನವದೆಹಲಿ: ದೇಶದಲ್ಲಿ ಡೈ-ಅಮೊನಿಯಮ್ ಫಾಸ್ಫೇಟ್ (ಡಿಎಪಿ) ರಾಸಾಯನಿಕದ ಪೂರೈಕೆಯು ಉತ್ತಮ ಮಟ್ಟದಲ್ಲಿಯೇ ಇದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿತು.
2022-23ರ ಹಿಂಗಾರು ಅವಧಿಯಲ್ಲಿ (2022ರ ಅಕ್ಟೋಬರ್‌ನಿಂದ 2023ರ ಜೂನ್-ಜುಲೈ) 55.38 ಲಕ್ಷ ಟನ್ ಡಿಎಪಿ ಅಗತ್ಯವಿತ್ತು.
ಡಿಸೆಂಬರ್ 14ರ ವೇಳೆಗೆ 47.88 ಲಕ್ಷ ಟನ್ ಡಿಎಪಿ ಲಭ್ಯವಿತ್ತು. ಫಲಾನುಭವಿಗಳಿಗೆ ನೇರ ವರ್ಗಾವಣೆ ವಿಧಾನದಲ್ಲಿ 36.67 ಲಕ್ಷ ಟನ್ ಡಿಎಪಿಯನ್ನು ಅಕ್ಟೋಬರ್ 1ರಿಂದ ಡಿಸೆಂಬರ್ 14ರ ವರೆಗಿನ ಅವಧಿಯಲ್ಲಿ ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ್ ಖೂಬಾ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ತಮಿಳುನಾಡು ಮತ್ತು ರಾಜಸ್ಥಾನಗಳಲ್ಲಿ ರಸಾಯನಿಕಗಳಿಗೆ ಕೊರತೆಯುಂಟಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿರುವ ಅವರು, ಡಿಎಪಿ ಜೊತೆ ಯೂರಿಯಾ, ಎಮ್‌ಒಪಿ, ಎಸ್‌ಎಸ್‌ಪಿ, ಎನ್‌ಪಿಕೆಎಸ್ ರಾಸಾಯನಿಕಗಳಿಗೂ ದೇಶದಲ್ಲಿ ಕೊರತೆಯುಂಟಾಗಿಲ್ಲ ಎಂದಿದ್ದಾರೆ.