HEALTH TIPS

ಪ್ರೀತಿಸಿ ಮದುವೆಯಾದ, ಅನ್ಯ ಜಾತಿಯವರನ್ನು ವಿವಾಹವಾದ ನೂರಾರು ಯುವಜನರ ಹತ್ಯೆಯಾಗುತ್ತಿದೆ: ಸಿಜೆಐ ಆತಂಕ

 

             ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕಳವಳ ವ್ಯಕ್ತಪಡಿಸಿದ್ದು, ಯಾರನ್ನಾದರೂ ಪ್ರೀತಿಸಿದ ಕಾರಣಕ್ಕೆ ಮತ್ತು ಅನ್ಯ ಜಾತಿಯವರನ್ನು ಮದುವೆಯಾದ ಕಾರಣಕ್ಕೆ ನಡೆಯುವ ಮರ್ಯಾದೆಗೇಡು ಹತ್ಯೆಯಿಂದ ನೂರಾರು ಯುವಜನರು ಸಾಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

                 ಬಾಂಬೆ ವಕೀಲರ ಸಂಘ ಮುಂಬೈನಲ್ಲಿ ಶನಿವಾರ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದ ಅವರು, 'ನೈತಿಕತೆ ಎಂಬುದು ಅಸ್ಥಿರ ಕಲ್ಪನೆಯಾಗಿದ್ದು ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದು ಸಿಜೆಐ ಹೇಳಿದರು. 1991ರಲ್ಲಿ ಉತ್ತರ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಹೇಗೆ ಕೊಂದರು ಎಂಬ ಬಗ್ಗೆ ಅವರು ವಿವರಿಸಿದರು.

                   ಗ್ರಾಮಸ್ಥರು ಅಪರಾಧ  ಒಪ್ಪಿಕೊಂಡಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿತ್ತು. ತಾವು ವಾಸಿಸುತ್ತಿದ್ದ ಸಮಾಜದ ನೀತಿ ಸಂಹಿತೆಗೆ ಅನುಗುಣವಾಗಿದ್ದ ಕಾರಣಕ್ಕೆ ಆ ಕ್ರಮಗಳು ಅವರಿಗೆ ಸ್ವೀಕಾರಾರ್ಹ ಮತ್ತು ಸಮರ್ಥನೀಯವಾಗಿದ್ದವು. ಆದರೆ ಈ ಸಂಹಿತೆಯನ್ನು ವಿಚಾರವಂತ ವ್ಯಕ್ತಿಗಳು ಮುಂಡಿಸಿದ್ದರೆ? ಪ್ರತಿ ವರ್ಷ ಪ್ರೀತಿಸಿದ ಅಥವಾ ತಮ್ಮ ಜಾತಿಯಿಂದ ಹೊರತಾದವರನ್ನು ಮದುವೆಯಾದ ಕಾರಣಕ್ಕೆ ಅನೇಕ ಮಂದಿ ಹತ್ಯೆಗೀಡಾಗುತ್ತಿದ್ದಾರೆ. ಸಾಮಾನ್ಯವಾಗಿ ನೈತಿಕತೆಯನ್ನು ಪ್ರಬಲ ಗುಂಪುಗಳು ನಿರ್ದೇಶಿಸುತ್ತವೆ. ದುರ್ಬಲ ಮತ್ತು ಸಮಾಜದಂಚಿನಲ್ಲಿರುವ ಗುಂಪುಗಳ ಸದಸ್ಯರನ್ನು ಪ್ರಬಲ ಗುಂಪುಗಳಿಗೆ ಅಧೀನರಾಗುವಂತೆ ಒತ್ತಾಯಿಸಲಾಗುತ್ತದೆ” ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

                  “ಸಂಹಿತೆ ಅಥವಾ ನೈತಿಕತೆಯನ್ನು ನಿರ್ಧರಿಸುವವರು ಯಾರು? ಬಲಾಢ್ಯ ಗುಂಪುಗಳು ದುರ್ಬಲ ವರ್ಗದವರ ಮೇಲೆ ಸವಾರಿ ಮಾಡುತ್ತವೆ. ದುರ್ಬಲ ಗುಂಪುಗಳನ್ನು ಸಮಾಜದ ತಳಸ್ತರದಲ್ಲಿ ಇರಿಸಲಾಗುತ್ತದೆ. ಒಂದು ವೇಳೆ ಅವರ ಒಪ್ಪಿಗೆಯನ್ನು ಪಡೆದರೂ ಅದು ಮಿಥ್ಯೆವಾಗಿರುತ್ತದೆ. ಸಮಾಜದಂಚಿನಲ್ಲಿರುವ ಸಮುದಾಯಗಳು ತಮ್ಮ ಉಳಿವಿಗಾಗಿ ಪ್ರಬಲ ಸಂಸ್ಕೃತಿಗೆ ಶರಣಾಗುವುದರ ಹೊರತಾಗಿ ಬೇರೆ ಆಯ್ಕೆಗಳಿರುವುದಿಲ್ಲ ಎಂದು ಅವರು ಹೇಳಿದರು.

                     ತಮ್ಮ ಭಾಷಣದಲ್ಲಿ ಅವರು ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧದಿಂದ ಹೊರಗಿಟ್ಟ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿ ನಾವು ಅನ್ಯಾಯ ಸರಿಪಡಿಸಿದ್ದೇವೆ ಎಂದರು. ಇದೇ ರೀತಿ, ವ್ಯಭಿಚಾರಕ್ಕೆ ದಂಡ ವಿಧಿಸುವ ಐಪಿಸಿಯ ಸೆಕ್ಷನ್ 497 ಅನ್ನು ಸರ್ವಾನುಮತದಿಂದ ಕಿತ್ತುಹಾಕಿದ ಸಂವಿಧಾನ ಪೀಠದ ತೀರ್ಪಿನ ಬಗ್ಗೆಯೂ ಮಾತನಾಡಿದ ಅವರು, "ಪ್ರಗತಿಪರ ಸಂವಿಧಾನದ ಮೌಲ್ಯಗಳು ನಮಗೆ ಮಾರ್ಗದರ್ಶಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಸಂವಿಧಾನದಿಂದ  ಅನ್ಯವಾದುದಲ್ಲ. ಹೀಗಾಗಿ ಭಾರತೀಯ ಸಂವಿಧಾನವನ್ನು ಜನ ಹೇಗಿದ್ದರೋ ಹಾಗೆ ವಿನ್ಯಾಸಗೊಳಿಸಿಲ್ಲ ಬದಲಿಗೆ ಹೇಗಿರಬೇಕು ಎಂದು ತಿಳಿಸುವಂತೆ ರಚಿಸಿದ್ದಾರೆ. ಸಂವಿಧಾನ ಎಂಬುದು ನಮ್ಮ ಮೂಲಭೂತ ಹಕ್ಕುಗಳ ಕಳಶದಂತಿದೆ. ಇದು ನಮ್ಮ ದೈನಂದಿನ ಜೀವನದಲ್ಲಿ ನಮಗೆ ಮಾರ್ಗದರ್ಶಕನಾಗುತ್ತದೆ” ಎಂದು ಅವರು  ತಿಳಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries