ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಾಳಿತಾರೂಢ ಬಿಜೆಪಿಗೆ ನೆಕ್ ಟು ನೆಕ್ ಪೈಟ್ ಕೊಟ್ಟ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರುವುದು ಖಚಿತ. ಈಗಾಗಲೇ ಮ್ಯಾಜಿಕ್ ನಂಬರ್ 35 ದಾಟಿರುವ ಕಾಂಗ್ರೆಸ್ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ.
ನವೆಂಬರ್ 12ರಂದು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 68 ಕ್ಷೇತ್ರಗಳಿದ್ದು, ಬಹುಮತ ಪಡೆಯಲು ಮ್ಯಾಜಿಕ್ ನಂಬರ್ 35. ಸಂಜೆ 4.10ರ ವೇಳೆಗೆ ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ 21 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇನ್ನೂ 9 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಈ ಪೈಕಿ ಬಿಜೆಪಿ 5, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕೆಲವೇ ಕ್ಷಣದಲ್ಲಿ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.
1985ರಿಂದ ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತಾ ಬಂದಿದೆ. ಕಳೆದ ಬಾರಿ ಬಿಜೆಪಿ 44 ಸೀಟುಗಳನ್ನು ಗೆದ್ದಿತ್ತು. 21 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ.
ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ದಿ. ವೀರಭದ್ರ ಸಿಂಗ್ ಅವರ ಪುತ್ರಿ ಪ್ರತಿಭಾ ವಿ. ಸಿಂಗ್ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ಗೆ ಬಹುಮತ ಸಿಗುತ್ತಿದ್ದಂತೆ ಸಂತಸ ಹಂಚಿಕೊಂಡಿರುವ ಪ್ರತಿಭಾ ಸಿಂಗ್, ಆಪರೇಷನ್ ಕಮಲದ ಬಗ್ಗೆ ಚಿಂತೆಯಿಲ್ಲ, ನಮ್ಮದೇ ಸರ್ಕಾರ ಎಂದಿದ್ದಾರೆ.