ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಗಾಗಿ ಸೀಮಾ ನಿರ್ಣಯ ಸಮಿತಿಯನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರಿಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಚುನಾವಣಾ ಆಯೋಗದ ಪರವಾಗಿ ಕೋರ್ಟ್‌ಗೆ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಅಭಯ್ ಎಸ್. ಓಕ ಅವರಿದ್ದ ಪೀಠವು ತೀರ್ಪನ್ನು ಕಾಯ್ದಿರಿಸಿತು.
ಸರ್ಕಾರದ ಈ ನಿರ್ಧಾರವು ಸಾಂವಿಧಾನಿಕ ಅವಕಾಶಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿ ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಮೊಹಮ್ಮದ್ ಆಯುಬ್ ಮಟ್ಟೂ ಅವರು ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.