ನವದೆಹಲಿ: 'ಕೊರೊನಾ ವೈರಸ್‌ನ ಸೋಂಕು ಅನೇಕ ರಾಷ್ಟ್ರಗಳಲ್ಲಿ ಹರಡುತ್ತಿದೆ. ಹೀಗಾಗಿ ಜನರು ಕೋವಿಡ್-19ಗೆ ಸಂಬಂಧಿಸಿ ಹೆಚ್ಚು ಜಾಗರೂಕತೆ ವಹಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಈ ವರ್ಷದ ಕೊನೆಯ 'ಮನ್ ಕಿ ಬಾತ್'ನಲ್ಲಿ ಈ ವಿಷಯ ಕುರಿತು ಮಾತನಾಡಿದ ಅವರು, 'ಕ್ರಿಸಮಸ್, ಹೊಸ ವರ್ಷಾಚರಣೆ ಅಥವಾ ರಜಾಕಾಲದ ಅಂಗವಾಗಿ ಸಾಕಷ್ಟು ಜನರು ಪ್ರವಾಸಕ್ಕೆ ತೆರಳುತ್ತಾರೆ.
ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು' ಎಂದರು.
'ಸ್ಫೂರ್ತಿದಾಯಕ ವರ್ಷ': ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿರುವ 2022, ಭಾರತದ ಪಾಲಿಗೆ ಅನೇಕ ವಿಷಯಗಳಲ್ಲಿ ಸ್ಫೂರ್ತಿದಾಯಕವಾಗಿತ್ತು ಎಂದು ಮೋದಿ ಹೇಳಿದರು.
'ದೇಶವು ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 220 ಕೋಟಿಗೂ ಅಧಿಕ ಡೋಸ್‌ಗಳಷ್ಟು ಕೋವಿಡ್ ಲಸಿಕೆ ನೀಡುವ ಮೂಲಕ, ಅಗಾಧ ಸಾಧನೆ ಮಾಡಿದೆ' ಎಂದರು.
'ರಫ್ತು ಕ್ಷೇತ್ರದಲ್ಲಿನ ಸಾಧನೆಯೂ ದೊಡ್ಡದು. 400 ಶತಕೋಟಿ ಡಾಲರ್ ಮೌಲ್ಯದಷ್ಟು ರಫ್ತು ವ್ಯವಹಾರ ಮಾಡಲಾಗಿದೆ. ಬಾಹ್ಯಾಕಾಶ, ರಕ್ಷಣೆ, ಡ್ರೋನ್ ಕ್ಷೇತ್ರಗಳಲ್ಲಿ ಸಹ ಭಾರತ ಅದ್ಭುತ ಸಾಧನೆ ಮಾಡಿದೆ' ಎಂದರು.
'ಪಾರಂಪರಿಕ ಚಿಕಿತ್ಸಾ ಪದ್ಧತಿ ಸಾಮರ್ಥ್ಯಕ್ಕೆ ಮನ್ನಣೆ'
'ದೇಶದ ಪಾರಂಪರಿಕ ವೈದ್ಯ ಹಾಗೂ ಚಿಕಿತ್ಸಾ ಪದ್ಧತಿಯ ಸಾಮರ್ಥ್ಯಕ್ಕೆ ಮನ್ನಣೆ ದೊರೆತಿದೆ. 2022ರಲ್ಲಿ ನಡೆದ ಹಲವಾರು ಸಂಶೋಧನೆಗಳು, ಸಾಧನೆಗಳಿಂದಾಗಿ ಭಾರತ ಹೊಸ ಎತ್ತರಕ್ಕೆ ಏರಿದಂತಾಗಿದೆ' ಎಂದು ಮೋದಿ 'ಮನ್ ಕಿ ಬಾತ್'ನಲ್ಲಿ ಹೇಳಿದರು.
'ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿ ಪರಿಣಾಮಕಾರಿ. ಆಧುನಿಕ ಔಷಧಗಳಂತೆಯೇ ಇವುಗಳ ಪರಿಣಾಮಕಾರಿತ್ವ ಕೂಡ ಪರೀಕ್ಷಾ-ಪ್ರಯೋಗಗಳ ಮೂಲಕ ಸಾಬೀತಾಗಿದೆ' ಎಂದರು.
'ಟಾಟಾ ಮೆಮೋರಿಯಲ್ ಸೆಂಟರ್, ಅಯುರ್ವೇದ ಹಾಗೂ ಯೋಗ ಪದ್ಧತಿಯ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿತ್ತು. ಪುರಾವೆಗಳ ಸಮೇತ ಈ ಪದ್ಧತಿಗಳ ಸಾಮರ್ಥ್ಯವನ್ನು ಪುರಸ್ಕರಿಸಿದೆ' ಎಂದರು.
'ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯೋಗ ಪರಿಣಾಮಕಾರಿ ಎಂಬುದು ಸಂಸ್ಥೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧನೆಯ ಫಲಿತಾಂಶಗಳನ್ನು ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕಾಲಜಿ ಸಮಾವೇಶದಲ್ಲಿ ಸಂಸ್ಥೆಯು ಪ್ರಸ್ತುತಪಡಿಸಿದೆ' ಎಂದು ಹೇಳಿದರು.
'ಸ್ವಾವಲಂಬನೆಗೆ ಭಾರತ ಒತ್ತು ನೀಡಿದೆ. ದೇಶೀಯವಾಗಿಯೇ ನಿರ್ಮಿಸಲಾದ, ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅನನ್ಯ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಥವಾ ಮಹಿಳಾ ಹಾಕಿ ತಂಡದ ಸಾಧನೆ ಉಲ್ಲೇಖಾರ್ಹ' ಎಂದರು.
'ಗುಜರಾತ್‌ನಲ್ಲಿ ಮಾಧವಪುರ ಮೇಳಾ, ವಾರಾಣಸಿಯಲ್ಲಿ ಕಾಶಿ-ತಮಿಳು ಸಂಗಮಮ್ ನಂತಹ ಕಾರ್ಯಕ್ರಮಗಳು 'ಏಕ ಭಾರತ-ಶ್ರೇಷ್ಠ ಭಾರತ'ದ ಪರಿಕಲ್ಪನೆಗೆ ಹೊಸ ಶಕ್ತಿಗೆ ತುಂಬಿದವು' ಎಂದು ಮೋದಿ ವಿವರಿಸಿದರು.