ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ ಏರ್ಪಟ್ಟಿದ್ದು, ಉಭಯ ದೇಶಗಳ ನಡುವಿನ ಸೈನಿಕರು ಸಂಘರ್ಷಕ್ಕಿಳಿದ ಪರಿಣಾಮ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳ ಪ್ರಕಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ವಾಸ್ತವ ಗಡಿ ರೇಖೆ (LAC) ಬಳಿ ಬಂದಿದ್ದ ಚೀನಾದ ಸೈನಿಕರಿಗೆ ಭಾರತೀಯ ಯೋಧರು ಪ್ರತಿರೋಧ ತೋರಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ಸಂಘರ್ಷ ಏರ್ಪಟ್ಟು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 9ರಂದು ಈ ಕಾದಾಟ ನಡೆದಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಘರ್ಷಣೆಯಲ್ಲಿ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ ಸೈನಿಕರೂ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
ಘಟನೆಯ ಹಿನ್ನೆಲೆಯಲ್ಲಿ ತವಾಂಗ್‌ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ವಾಸ್ತವ ಗಡಿ ರೇಖೆಯುದ್ಧಕ್ಕೂ ಕೆಲವು ವಿವಾದಿತ ಪ್ರದೇಶಗಳಿವೆ. ಎರಡೂ ಕಡೆಯವರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳ ಅಂಚಿನ ವರೆಗೆ ಗಸ್ತು ತಿರುಗುತ್ತಾರೆ. 2006ರಿಂದ ಈ ಪ್ರವೃತ್ತಿ ನಡೆಯುತ್ತಲೇ ಬಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.