ಭೋಪಾಲ್: 'ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಿರುವುದೂ ಸೇರಿದಂತೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಸಾಂಕೇತಿಕ ಬದಲಾವಣೆಗಳು ಆಗಿವೆ. ಇದು ದೇಶ ವಸಾಹತುಶಾಹಿಯಿಂದ ಹೊರಬರುತ್ತಿರುವುದರ ದ್ಯೋತಕ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಭಾರತೀಯ ವಿಚಾರ ಸಂಸ್ಥಾನ ನ್ಯಾಸ ಹಮ್ಮಿಕೊಂಡಿರುವ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ 'ಶ್ರೇಷ್ಠ ಭಾರತದ ನಿರ್ಮಾಣದಲ್ಲಿ ಪ್ರಬುದ್ಧ ಜನರ ಪಾತ್ರ' ಎಂಬ ವಿಷಯದ ಕುರಿತು ಮಾತನಾಡಿದ ಅವರು, 'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಈ ದಿಸೆಯಲ್ಲಿನ ಒಂದು ಹೆಜ್ಜೆ' ಎಂದರು.
ಬ್ರಿಟಿಷರು ಸ್ಥಾಪಿಸಿದ್ದ ಆಡಳಿತಾತ್ಮಕ ಯಂತ್ರವನ್ನು ಭಾರತೀಯರು ನಡೆಸುತ್ತಿದ್ದಾರೆ. ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಡಳಿತ ಯಂತ್ರ ಸ್ಥಾಪಿಸುವ ಜರೂರತ್ತು ಅವರಿಗೆ ಇದೆ ಎಂದು ಬ್ರಿಟನ್‌ನ ಪತ್ರಕರ್ತ ಮಾರ್ಕ್ ಟುಲ್ಲಿ ಈ ಹಿಂದೆ ಹೇಳಿದ್ದನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
'ಭಾರತಕ್ಕೆ ಈಗ ಅಪಾರ ಮನ್ನಣೆ ದೊರೆಯುತ್ತಿದೆ. ಜನರಲ್ಲಿ 'ಸ್ವಯಂ' ಭಾವನೆ ಮೂಡಿಸುವುದಕ್ಕೆ ಇದು ಅಮೃತ ಕಾಲ. ಇದರ ಆಧಾರದಲ್ಲೇ ಶ್ರೇಷ್ಠ ಭಾರತದ ಅಭಿವೃದ್ಧಿ ಸಾಧ್ಯ' ಎಂದು ಹೇಳಿದ್ದಾರೆ.
'ಭಾರತದ ನಾಗರಿಕರು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೀತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಭಾರತವು ಜಗತ್ತಿನ ಐದನೇ ಆರ್ಥಿಕತೆಯಾಗಿ ರೂಪುಗೊಂಡಿದ್ದು, ವಿಶ್ವದ ವಿವಿಧ ದೇಶಗಳ ಆರ್ಥಿಕ ತಜ್ಞರು ಭಾರತವು ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಸ್ವೀಕರಿಸುತ್ತಿದ್ದಾರೆ' ಎಂದೂ ತಿಳಿಸಿದ್ದಾರೆ.
ಸಿಬಿಐ ಮಾಜಿ ನಿರ್ದೇಶಕ ರಿಷಿಕುಮಾರ್ ಶುಕ್ಲಾ, 'ಭಾರತವು ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿದ್ದು, ಜಗತ್ತಿಗೆ ತನ್ನ ಸಂಸ್ಕೃತಿ ಪರಿಚಯಿಸಲು ಇದು ಉತ್ತಮ ಅವಕಾಶ' ಎಂದಿದ್ದಾರೆ.