ನವದೆಹಲಿ: ಕೋವಿಡ್ ನಂತರ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಏರಿಕೆ ಕಂಡಿದ್ದು, ಖಾಸಗಿ ಶಾಲೆಗಳಲ್ಲಿ ಕುಸಿತ ಕಂಡಿದೆ ಎಂದು ಕೇಂದ್ರದ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಸೋಮವಾರ ಲೋಕಸಭೆಗೆ ತಿಳಿಸಿದರು.
ಶಿಕ್ಷಣ ಸಚಿವಾಲಯವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶಾಲಾ ಶಿಕ್ಷಣದ ಡಾಟಾವನ್ನು ದಾಖಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಡಿಒಎಸ್‌ಇಎಲ್) ಹಾಗೂ ಯುನಿಫೈಡ್ ಡಿಸ್ಟ್ರಿಕ್ಟ್ ಇನ್‌ಫರ್ಮೇಷನ್ ಸಿಸ್ಟಂ ಫಾರ್ ಎಜುಕೇಷನ್ ಪ್ಲಸ್ (ಯುಡಿಐಎಸ್‌ಇ+) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಯುಡಿಐಎಸ್‌ಇ+ ಮಾಹಿತಿ ಪ್ರಕಾರ, 2019-20ರಲ್ಲಿ ಸರ್ಕಾರಿ ಶಾಲೆಗಳಲ್ಲಿ 13.09 ಕೋಟಿ ದಾಖಲಾತಿ ಆಗಿದ್ದು, 2020-21ರಲ್ಲಿ 13.49 ಕೋಟಿ ಮತ್ತು 2021-22ರಲ್ಲಿ 14.32 ಕೋಟಿಗೆ ಏರಿಕೆ ಕಂಡಿದೆ. ಅದೇ ಖಾಸಗಿ ಶಾಲೆಗಳಲ್ಲಿ 2019-20ರಲ್ಲಿ 9.82 ಕೋಟಿ ದಾಖಲಾತಿ ಆಗಿದ್ದರೆ, 2020-21ರಲ್ಲಿ 9.51 ಕೋಟಿ ಹಾಗೂ 2020-22ರಲ್ಲಿ 8.82 ಕೋಟಿಗೆ ಕುಸಿದಿದೆ. ಆದರೆ ಈ ಅವಧಿಯಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಮತ್ತು ಇತರೆ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಇಳಿಮುಖವಾಗಿದೆ ಎಂದು ಸಚಿವರು ಹೇಳಿದರು.
ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ನಿರಂತರ ಪ್ರಕ್ರಿಯೆಯಾಗಿದೆ. ನಿವೃತ್ತಿ, ರಾಜೀನಾಮೆ ಮತ್ತು ಹೊಸ ಶಾಲೆಗಳ ಕಾರಣದಿಂದಾಗಿ ಹೆಚ್ಚುವರಿ ಅವಶ್ಯಕತೆಗಳು ಉಂಟಾಗಿ ಖಾಲಿ ಹುದ್ದೆಗಳು ಇರುತ್ತವೆ. ಅದಾಗ್ಯೂ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಾ ಯೋಜನೆಯ ಮೂಲಕ ಶಿಕ್ಷಣ ಸಚಿವಾಲಯ ಸಲಹೆ ನೀಡುವುದರ ಜೊತೆಗೆ ಸಹಾಯವನ್ನು ನೀಡುತ್ತದೆ ಎಂದರು.