ಕೋಟಯಂ: ಬ್ರಿಟನ್‌ನಲ್ಲಿ ಕೇರಳದ ದಾದಿ ಮತ್ತು ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪತಿಯ ವಿರುದ್ಧವೇ ಆಕೆಯ ಪೋಷಕರು ಆರೋಪ ಮಾಡಿದ್ದಾರೆ.
ದಾದಿ ಅಂಜು ಅಶೋಕ್‌ಗೆ ಹಿಂದೆಯೂ ಪತಿ ಹಲ್ಲೆ ನಡೆಸಿದ್ದ ಎಂದು ಕೇರಳದ ವೈಕಂನಲ್ಲಿರುವ ಆಕೆಯ ಪೋಷಕರು ಶನಿವಾರ ಆರೋಪಿಸಿದ್ದಾರೆ.
ಈ ಮೊದಲು ಸೌದಿ ಅರೇಬಿಯಾದಲ್ಲಿದ್ದಾಗಲೂ ಅಂಜು ಮತ್ತು ಮಕ್ಕಳಿಕೆ ಆಕೆಯ ಪತಿ ಥಳಿಸುತ್ತಿದ್ದ ವಿಚಾರವನ್ನೂ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಹಗ್ಗ ಅಥವಾ ಬಟ್ಟೆಯಿಂದ ಅಂಜು ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿರುವುದಾಗಿಯೂ ಅವರು ಹೇಳಿದ್ದಾರೆ.
35 ವರ್ಷದ ಅಂಜು, ಆಕೆಯ ಆರು ವರ್ಷದ ಮಗ ಮತ್ತು 4 ವರ್ಷದ ಮಗಳು ತೀವ್ರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ಇಂಗ್ಲೆಂಡ್‌ನ ನಾರ್ಥಾಂಪ್ಟನ್ ಪ್ರದೇಶದ ಕೆಟ್ಟರಿಂಗ್‌ನಲ್ಲಿರುವ ಮನೆಯಲ್ಲಿ ಗುರುವಾರ ಪತ್ತೆಯಾಗಿದ್ದರು. ಅಂಜು ಮನೆಯಲ್ಲೇ ಮೃತಪಟ್ಟರೆ, ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಂಜು ಪತಿ ಸಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.