ಬುದೌನ್ : 'ಕಲ್ಲು ಹೊಡೆದಿದ್ದರಿಂದ ಇಲಿ ಸತ್ತಿಲ್ಲ. ಸೋಂಕಿನಿಂದಾಗಿ ಇಲಿಯ ಶ್ವಾಸಕೋಶದಲ್ಲಿ ಊತ ಕಂಡುಬಂದಿದೆ. ಇಲಿಯ ಸಾವಿಗೆ ಸೋಂಕು ಕಾರಣ'.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಇಲಿಯ 'ಶಂಕಾಸ್ಪದ' ಸಾವಿನ ಪ್ರಕರಣದ ಸಂಬಂಧ, ಇಲಿಯ ಕಳೇಬರದ ಪರೀಕ್ಷೆ ನಡೆಸಿದ ಇಬ್ಬರು ಪಶುಸಂಗೋಪನಾ ವೈದ್ಯರು ಸಲ್ಲಿಸಿದ ವರದಿಯ ಸಾರಾಂಶ ಇದು.
ಪ್ರಾಣಿರಕ್ಷಣಾ ಕಾರ್ಯಕರ್ತರೊಬ್ಬರ ದೂರು ಆಧರಿಸಿ ಮನೋಜ್ ಕುಮಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದ್ಯ, ಅವರು ಜಾಮೀನು ಮೇಲೆ ಹೊರಗಿದ್ದಾರೆ. 'ಇಲಿ ಬಾಲಕ್ಕೆ ಕಲ್ಲಿನಿಂದ ಹೊಡೆದು ಚರಂಡಿಗೆ ಎಸೆದಿದ್ದು, ಇಲಿ ಸತ್ತಿದೆ' ಎಂಬುದು ಆರೋಪ.
ದೂರು ದಾಖಲಿಸಿದ ಪೊಲೀಸರು, ಇಲಿ ಕಳೇಬರವನ್ನು ಪಶುಸಂಗೋಪನಾ ಆಸ್ಪತ್ರೆಗೆ ಕಳುಹಿಸಿದರು. ಆದರೆ, ಆಸ್ಪತ್ರೆ ಸಿಬ್ಬಂದಿ ಪರೀಕ್ಷೆ ನಡೆಸಲು ನಿರಾಕರಿಸಿದರು. ಬಳಿಕ ಕಳೇಬರವನ್ನು ಭಾರತೀಯ ಪಶುಸಂಗೋಪನಾ ಸಂಶೋಧನಾ ಸಂಸ್ಥೆಗೆ(ಐವಿಆರ್‌ಐ) ಕಳುಹಿಸಲಾಯಿತು.
'ವರದಿ ಬಂದಿದೆ. ಶ್ವಾಸಕೋಶದಲ್ಲಿ ಸೋಂಕು ಉಂಟಾಗಿ ಇಲಿ ಸತ್ತಿದೆ' ಎಂದು ಐವಿಆರ್‌ಐ ಜಂಟಿ ನಿರ್ದೇಶಕ ಕೆ.ಪಿ.ಸಿಂಗ್ ತಿಳಿಸಿದರು. 'ವರದಿ ಇನ್ನೂ ನಮ್ಮ ಕೈಸೇರಿಲ್ಲ' ಎಂದು ಪೊಲೀಸ್ ಅಧಿಕಾರಿ ಅಲೋಕ್ ಮಿಶ್ರಾ ಹೇಳಿದ್ದಾರೆ. ಆರೋಪಿ ಸದ್ಯ ಜಾಮೀನು ಪಡೆದಿದ್ದಾರೆ.