ನವದೆಹಲಿ: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸುವಂತೆ ಗುಜರಾತ್ ಸರಕಾರಕ್ಕೆ ಸೂಚಿಸಿ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಂತ್ರಸ್ತೆ ಬಿಲ್ಕಿಸ್ ಬಾನೋ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶನಿವಾರ ವಜಾಗೊಳಿಸಿದೆ.
ತನ್ನ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳ ಕ್ಷಮಾಪಣೆಯನ್ನು ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿರುವ ನೀತಿಯಂತೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ಮೇ13ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಂತ್ರಸ್ತ ಮಹಿಳೆ ಬಿಲ್ಕಿಸ್ ಬಾನೋ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
2002 ರ ಗುಜರಾತ್ ಗಲಭೆಯಲ್ಲಿ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಏಳು ಸದಸ್ಯರು ಕೊಲ್ಲಲ್ಪಟ್ಟಿದ್ದರು. ಸುಪ್ರೀಂ ಕೋರ್ಟ್ ನ ಅರ್ಜಿ ವಿಚಾರಣೆ ಕಾರ್ಯವಿಧಾನಗಳ ಪ್ರಕಾರ, ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ವಿರುದ್ಧದ ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲನೆಯಲ್ಲಿರುವ ತೀರ್ಪಿನ ಭಾಗವಾಗಿರುವ ನ್ಯಾಯಾಧೀಶರು ನಿರ್ಧರಿಸುತ್ತಾರೆ. ಮರುಪರಿಶೀಲನಾ ಅರ್ಜಿಯು ಮೊನ್ನೆ ಡಿಸೆಂಬರ್ 13 ರಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರ ಪೀಠದ ಮುಂದೆ ವಿಚಾರಣೆಗೆ ಬಂತು.
ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ನಿಮಗೆ ತಿಳಿಸಲು ನನಗೆ ನಿರ್ದೇಶನ ಬಂದಿದೆ ಎಂದು ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ಅವರು ಬಾನೋ ಅವರ ವಕೀಲ ಶೋಭಾ ಗುಪ್ತಾ ಅವರಿಗೆ ಕಳುಹಿಸಿರುವ ಪತ್ರವನ್ನು ತಿಳಿಸಿದ್ದಾರೆ.
ಮೇ 13ರಂದು ಸುಪ್ರೀಂ ಕೋರ್ಟ್ ಏನು ತೀರ್ಪು ನೀಡಿತ್ತು?: ಬಿಲ್ಕಿಸ್ ಬಾನೋ ಅವರು ಕಳೆದ ಮೇ 13 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಾಮೂಹಿಕ ಅತ್ಯಾಚಾರ ಕೇಸಿನಲ್ಲಿ ಎಲ್ಲಾ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿ ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಜೈಲಿನಿಂದ ಬಿಡುಗಡೆ ಮಾಡಿತ್ತು.
ಮೇ 13 ರಂದು ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಅಪರಾಧಿಗಳ ಕ್ಷಮೆಯನ್ನು ಅಪರಾಧವು ನಿಜವಾಗಿ ಎಸಗಿರುವ ರಾಜ್ಯದಲ್ಲಿ ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ಪರಿಗಣಿಸಬೇಕು ಎಂದು ತೀರ್ಪು ನೀಡಿತ್ತು. ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾಂದಾಸ್ ಷಾ ಅವರು 1992ರ ಜುಲೈ 9 ರ ನೀತಿಯ ಅಡಿಯಲ್ಲಿ ಅವಧಿಪೂರ್ವ ಬಿಡುಗಡೆಗಾಗಿ ತನ್ನ ಅರ್ಜಿಯನ್ನು ಪರಿಗಣಿಸಲು ಗುಜರಾತ್ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್‌ನ ತೀರ್ಪು ಬಂದಿತ್ತು.
ಜೈಲಿನಿಂದ ಹೊರಬಂದವರಿಗೆ ಭವ್ಯ ಸ್ವಾಗತ ನೀಡಿದ್ದು ಅದಕ್ಕೆ ಕೂಡ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.