ಮುಂಬೈ:ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೊ ದರವನ್ನು ತಕ್ಷಣದಿಂದ ಶೇ.0.35ರಷ್ಟು ಹೆಚ್ಚಿಸಿದೆ. ರೆಪೊ ದರವನ್ನು 36 ಮೂಲಾಂಶ, ಅಂದರೆ ಶೇ.6.25ಕ್ಕೆ ಹೆಚ್ಚಿಸಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಆರ್ ಬಿ ಐ ಈಗಾಗಲೇ ರೆಪೊ ದರವನ್ನು ಮೂರು ಬಾರಿ ಶೇ.0.50ರಷ್ಟು ಹೆಚ್ಚಿಸಿದೆ. ಚಿಲ್ಲರೆ ಹಣದುಬ್ಬರವು ಕಡಿಮೆ ಆಗುತ್ತಿರುವುದರಿಂದ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ರೆಪೊ ದರವನ್ನು ಶೇ.0.25ರಿಂದ ಶೇ.0.35ರ ತನಕ ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ದರ ಏರಿಕೆಯಿಂದ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಲಿದೆ. ಠೇವಣಿ ಸೌಲಭ್ಯಗಳ ಮೇಲಿನ ದರವನ್ನು ಕೂಡ ಹೆಚ್ಚಿಸಲಾಗಿದೆ. ವರ್ಷದ ಕಡೆಯ ಎಂಪಿಸಿ ಸಭೆ ಆಗಿದೆ.
ಕಳೆದ ಏಪ್ರಿಲ್ನಲ್ಲಿ ಹಣ ದುಬ್ಬರ ಪ್ರಮಾಣ ಶೇ.7.79ಕ್ಕೆ ಏರಿದ್ದರಿಂದ ಪದಾರ್ಥಗಳ ಬೆಲೆ ಅಧಿಕವಾಯಿತು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಎಂಪಿಸಿ ಸಭೆ ರೆಪೊ ದರವನ್ನು 40 ಮೂಲಾಂಶ ಹಿಗ್ಗಿಸಿತು. ಆದರೂ ಹಣದುಬ್ಬರದಲ್ಲಿ ಸುಧಾರಣೆ ಕಾಣದ ಕಾರಣ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮತ್ತೆ ತಲಾ 50 ಮೂಲಾಂಶವನ್ನು ಆರ್ಬಿಐ ಏರಿಕೆ ಮಾಡಿತು. ತತ್ಪರಿಣಾಮ ಅಕ್ಟೋಬರ್ನಲ್ಲಿ ಹಣದುಬ್ಬರದ ಪ್ರಮಾಣ ಶೇ. 6.77ಕ್ಕೆ ಇಳಿದಿದೆ. ಆರ್ಬಿಐ ಅಂದಾಜಿನಂತೆ ಇದು ಶೇ.6ರೊಳಗೆ ಇರಬೇಕು.
ರೆಪೊ ದರ ಹೆಚ್ಚಳ ಪರಿಣಾಮ ಮೇ ತಿಂಗಳವರೆಗೆ ಶೇ.4.4 ಇದ್ದ ರೆಪೊ ದರ, ಸೆಪ್ಟೆಂಬರ್ ಮಾಹೆಯಲ್ಲಿ ಶೇ.5.9ಕ್ಕೆ ಜಿಗಿಯಿತು. ಇದರಿಂದ ಬ್ಯಾಂಕ್ಗಳು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಇನ್ನಿತರ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಇದು ಗ್ರಾಹಕರ ಇಎಂಐ ಮೇಲೆ ಪರಿಣಾಮಬೀರಿದೆ. ರೆಪೊ ದರ ಏರಿದಷ್ಟು ಆರ್ಥಿಕತೆಯ ವೇಗ ಕಡಿಮೆ ಆಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಸಿಎನ್ಜಿ ಮೇಲೆ ಅಬಕಾರಿ ತೆರಿಗೆ ತಗ್ಗಿಸಲು ಶಿಫಾರಸು
ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಮತ್ತು ಸಿಎನ್ಜಿಯನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಕೀರ್ತಿ ಪಾರಿಖ್ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಸಿಎನ್ಜಿ ಪರಿಸರಸ್ನೇಹಿ ಇಂಧನವಾಗಿದೆ. ಜತೆಗೆ ನೈಸರ್ಗಿಕ ತೈಲದ ಮೇಲೆ ಯಾವುದೇ ಅಬಕಾರಿ ಸುಂಕ ಇಲ್ಲದಿರುವಾಗ ಸಿಎನ್ಜಿ ಮೇಲೆ ಶೇ.14 ಅಬಕಾರಿ ಸುಂಕ ಹೇರಿರುವುದು ತರವಲ್ಲ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಕೇಂದ್ರದ ಈ ತೆರಿಗೆಯ ಜತೆಗೆ ರಾಜ್ಯಗಳ ವ್ಯಾಟ್ ಸುಂಕ ಶೇ.24.5 ಇದೆ ಎಂದು ಹೇಳಿದೆ. ಮಾರುಕಟ್ಟೆ ಆಧಾರಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ದರ ಪರಿಷ್ಕರಣೆ ಕುರಿತು ವರದಿ ನೀಡುವಂತೆ ಸಮಿತಿಯನ್ನು ಪೆಟ್ರೋಲಿಯಂ ಸಚಿವಾಲಯ ನೇಮಿಸಿತ್ತು.