ಲಖನೌ: ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೊ' ಯಾತ್ರೆಯ ಜೊತೆ ಕೈಜೋಡಿಸದಿರಲು ಸಮಾಜವಾದಿ ಪಕ್ಷ ಸೇರಿದಂತೆ ಉತ್ತರಪ್ರದೇಶದ ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ.
ಬಿಎಸ್‌ಪಿ, ರಾಷ್ಟ್ರೀಯ ಲೋಕದಳ ಸೇರಿದಂತೆ ಕೆಲವು ಪಕ್ಷಗಳು ಈ ನಿರ್ಧಾರ ಪ್ರಕಟಿಸಿವೆ.
ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿದೆ ಎಂದು ಯಾತ್ರೆಯ ಮೂಲಕ ಸಂದೇಶ ರವಾನಿಸುವ ಕಾಂಗ್ರೆಸ್‌ನ ಉದ್ದೇಶಕ್ಕೆ ಇದರಿಂದ ಹಿನ್ನಡೆಯಾಗಿದೆ.
'ಭಾರತ್ ಜೋಡೊ ಯಾತ್ರೆಗೆ ವಿರುದ್ಧವಾಗಿ ನಾವು ಇಲ್ಲ. ಆದರೆ, ಪೂರ್ವನಿರ್ಧರಿತ ಕಾರ್ಯಕ್ರಮಗಳಿಂದಾಗಿ ನಾವು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ' ಎಂದು ಸಮಾಜವಾದಿ ಪಕ್ಷ, ಬಿಎಸ್‌ಪಿ, ಇತರೆ ಕೆಲವು ಪಕ್ಷಗಳು ಕಾರಣವನ್ನು ನೀಡಿವೆ. ಯಾತ್ರೆಯು ಜ.3ರಂದು ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಲಿದೆ.
ಯಾತ್ರೆಯಲ್ಲಿ ಭಾಗವಹಿಸುವಂತೆ ಅಖಿಲೇಶ್ ಯಾದವ್ ಅವರಿಗೆ ಕಾಂಗ್ರೆಸ್ ಆಹ್ವಾನಿಸಿದೆ. ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಭಾಗವಹಿಸುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಆರ್‌ಜೆಡಿ ಅಧ್ಯಕ್ಷ ಜಯಂತ್ ಚೌಧರಿ ಅವರು ಭಾಗವಹಿಸುತ್ತಿಲ್ಲ ಎಂದು ಆ ಪಕ್ಷದ ಮುಖಂಡರು ಸ್ಪಷ್ಟಪಡಿಸಿದರೆ, ಬಿಎಸ್‌ಪಿ ಭಾಗವಹಿಸುವುದಿಲ್ಲ ಎಂದು ಆ ಪಕ್ಷದ ಮೂಲಗಳು ದೃಢಪಡಿಸಿವೆ.
ಎಸ್‌ಬಿಎಸ್‌ಬಿ ಭಾಗಿ: ರಾಜ್‌ಭರ್ ಸಮುದಾಯವನ್ನು ಪ್ರತಿನಿಧಿಸುವ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿಯ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಪಕ್ಷ ಅಖಿಲೇಶ್ ಯಾದವ್, ಜಯಂತ್, ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ, ಸಿಪಿಐ ನಾಯಕ ಅತುಲ್ ಅಂಜನ್, ಮಾಜಿ ಸಚಿವ ಶಿವಪಾಲ್ ಸಿಂಗ್ ಯಾದವ್, ರಾಜಭರ್ ಅವರನ್ನು ಆಹ್ವಾನಿಸಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಅಷ್ಟೊಂದು ಪ್ರಭಾವಿಯಲ್ಲ ಎಂದು ಎಸ್‌ಪಿ., ಬಿಎಸ್‌ಪಿ, ಆರ್‌ಎಲ್‌ಡಿ ಭಾವಿಸಿವೆ. ಹೀಗಾಗಿ, ಆ ಪಕ್ಷದ ನೇತೃತ್ವದ ಜಾಥಾದಲ್ಲಿ ಪಾಲ್ಗೊಳ್ಳಲು ಬಯಸುತ್ತಿಲ್ಲ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.
'ಕಾಶ್ಮೀರ: ಮೂವರು ಮಾಜಿ ಸಿ.ಎಂಗಳ ಬೆಂಬಲ'
ಶ್ರೀನಗರ: 'ಭಾರತ್ ಜೋಡೊ' ಯಾತ್ರೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮುಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ನಿರ್ಧರಿಸಿದ್ದಾರೆ.
'ಯಾತ್ರೆ ಪರಿಣಾಮಕಾರಿಯಾಗಿ ಆಗುತ್ತಿದೆ. ಜಾತ್ಯತೀತ ಚಿಂತನೆಗೆ ಧಕ್ಕೆಆಗಬಾರದು ಎಂಬ ಚಿಂತನೆ ಬಲವಾಗುತ್ತಿದೆ ಎಂಬುದಕ್ಕೆ ಇದು ನಿದರ್ಶನ' ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾತ್ರೆಯು ಕಾಶ್ಮೀರವನ್ನು ಜನವರಿ ಮೂರನೇ ವಾರದಲ್ಲಿ ಪ್ರವೇಶಿಸಲಿದೆ. ಯಾತ್ರೆ ಡಿ. 24ರಂದು ರಾಜಧಾನಿ ನವದೆಹಲಿ ಪ್ರವೇಶಿಸಿದೆ. ಒಂಭತ್ತು ದಿನಗಳ ವಿರಾಮದ ಬಳಿಕ ಜ.3ಕ್ಕೆ ಉತ್ತರ ಪ್ರವೇಶ ಪ್ರವೇಶಿಸಲಿದೆ.