ರೂರ್ಕಿ: ಜೀವನ ಯಾವ ಕ್ಷಣದಲ್ಲಿ ಹೇಗೆ ಬದಲಾಗುತ್ತದೆ ಎಂದು ಹೇಳುವುದು ಅಸಾಧ್ಯ. ಕೋಟ್ಯಧಿಪತಿಯಾಗಿದ್ದವ ಇದ್ದಕ್ಕಿದ್ದಂತೆ ಭಿಕಾರಿ ಆಗಿಬಿಡಬಹುದು. ಭಿಕ್ಷೆ ಬೇಡುತ್ತಿದ್ದವ ಅಚ್ಚರಿ ಎಂಬಂತೆ ಕೋಟ್ಯಧಿಪತಿ ಆಗಿಬಿಡಬಹುದು. ಭಿಕ್ಷುಕನಾಗಿದ್ದ ಬಾಲಕನೊಬ್ಬ ಕೂಡ ಹೀಗೆ ಕೋಟ್ಯಧಿಪತಿಯಾದ ಅತ್ಯಪರೂಪದ ಪ್ರಸಂಗವಿದು.
ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕೀ ಎಂಬಲ್ಲಿನ ಪಿರನ್ ಕಲಿಯಾರ್ ಎಂಬ ಸೂಫಿಗಳ ಪವಿತ್ರ ಕ್ಷೇತ್ರದಲ್ಲಿ ಭಿಕ್ಷೆ ಬೇಡುತ್ತಿದ್ದ ಷಹಜೇಜ್ ಅಲಂ ಎಂಬ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ ಎಂದರೆ ಎಂಥವರಿಗೂ ಒಮ್ಮೆ ಅಚ್ಚರಿ ಆಗದೆ ಇರದು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಪವಿತ್ರ ಕ್ಷೇತ್ರದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಬಾಲಕ ಈಗ 2 ಕೋಟಿ ರೂ. ಆಸ್ತಿಗೆ ಮಾಲೀಕ!
ಉತ್ತರಪ್ರದೇಶ ಷಹರನ್ಪುರ ಜಿಲ್ಲೆಯ ಪಂಡೌಲಿ ಗ್ರಾಮದ ಮೊಹಮ್ಮದ್ ನವೆದ್ ಮತ್ತು ಇಮ್ರಾನಾ ಬೇಗಂ ಅವರ ಏಕೈಕ ಪುತ್ರ ಷಹಜೇಜ್ ಅಲಂ. 2019ರಲ್ಲಿ ಈತನ ತಂದೆ ದೀರ್ಘಕಾಲದ ಅನಾರೋಗ್ಯದಿಂದ ತೀರಿಹೋಗಿದ್ದರು. ಅದಕ್ಕೂ ಸ್ವಲ್ಪ ಸಮಯ ಮುಂಚೆ ತಾಯಿ ತನ್ನ ಪತಿಯನ್ನು ಬಿಟ್ಟು ಪುತ್ರನನ್ನು ಕರೆದುಕೊಂಡು ಬಂದು ಯಮುನಾನಗರದಲ್ಲಿರುವ ತಂದೆಯ ಮನೆಯಲ್ಲಿ ನೆಲೆಸಿದ್ದಳು. ನಂತರ ಅಲ್ಲಿಂದ ಈಕೆ ಪಿರನ್ ಕಲಿಯರ್ ಪವಿತ್ರ ಕ್ಷೇತ್ರದ ಬಳಿ ಬಂದು ಪುತ್ರನೊಂದಿಗೆ ನೆಲೆಸಿ, ಜೀವನೋಪಾಯಕ್ಕಾಗಿ ಅದು ಇದು ಎಂದು ಸಿಕ್ಕ ಕೆಲಸಗಳನ್ನು ಮಾಡುತ್ತಿದ್ದಳು. ಆದರೆ 2021ರಲ್ಲಿ ತಾಯಿ ಕೋವಿಡ್ನಿಂದಾಗಿ ತೀರಿಹೋದ ಬಳಿಕ ಅಕ್ಷರಶಃ ಅನಾಥನಂತಾದ ಷಹಜೇಜ್ ಅದೇ ಪವಿತ್ರ ಕ್ಷೇತ್ರದಲ್ಲಿ ಭಿಕ್ಷೆ ಬೇಡಲಾರಂಭಿಸುತ್ತಾನೆ.
ಈ ಮಧ್ಯೆ ಷಹಜೇಜ್ ಅಜ್ಜ ಮೊಹಮ್ಮದ್ ಯಾಕೂಬ್ 2021ರಲ್ಲಿ ಸತ್ತ ಬಳಿಕ ಒಂದು ಅಚ್ಚರಿಯ ಸಂಗತಿ ಗೊತ್ತಾಗುತ್ತದೆ. ಆತ ತನ್ನ ಸುಮಾರು 2 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ತನ್ನ ಪುತ್ರ ನವೆದ್ನ ಮಗನಿಗೆ ಸಲ್ಲಬೇಕು ಎಂದು ವಿಲ್ನಲ್ಲಿ ಬರೆದಿಟ್ಟಿದ್ದ. ಆ ಪ್ರಕಾರ 2 ಅಂತಸ್ತಿನ ಮನೆ ಹಾಗೂ ಒಂದಷ್ಟು ಖಾಲಿ ಜಾಗ ಷಹಜೇಜ್ಗೆ ಸೇರಬೇಕಾಗಿರುತ್ತದೆ. ಆಗ ಮನೆಯವರು ಆತ ಎಲ್ಲಿದ್ದಾನೆ ಎಂದು ಪತ್ತೆ ಮಾಡಲು ಎಲ್ಲ ಕಡೆ ಮಾಹಿತಿ ರವಾನಿಸುತ್ತಾರೆ. ಹೀಗೆ ಷಹಜೇಜ್ ಪಿರನ್ ಕಲಿಯರ್ನಲ್ಲಿದ್ದಾನೆ ಎಂಬುದು ಬುಧವಾರ ಗೊತ್ತಾದ ಮೇಲೆ ಅಲ್ಲಿಂದ ಆತನನ್ನು ಷಹರನ್ಪುರ್ಗೆ ವಾಪಸ್ ಕರೆದುಕೊಂಡು ಬರುತ್ತಾರೆ. ಆತ ಸಿಗುವುದೇ ಇಲ್ಲ ಎಂಬಂಥ ಪರಿಸ್ಥಿತಿಯಲ್ಲೂ ಸಿಕ್ಕಿದ್ದರಿಂದ ಈಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿದೆ ಎಂದು ಷಹಜೇಜ್ ಅಲಂ ಸಂಬಂಧಿಕರು ಹೇಳಿಕೊಂಡಿದ್ದಾರೆ.