ನವದೆಹಲಿ: 'ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಂಕಷ್ಟ ಎದುರಿಸಬೇಕಾಗುತ್ತದೆ' ಎಂದು ಇಲ್ಲಿನ ರಾಮ್ ಲೀಲಾ ಮೈದಾನದಲ್ಲಿ ಸೋಮವಾರ ಆರ್‌ಎಸ್‌ಎಸ್ ಸಂಯೋಜಿತ ರೈತ ಸಂಘಟನೆ ಭಾರತ ಕಿಸಾನ್ ಸಂಘ (ಬಿಕೆಎಸ್) ಆಯೋಜಿಸಿದ್ದ 'ಕಿಸಾನ್ ಘರ್ಜನಾ' ರ‍್ಯಾಲಿಯಲ್ಲಿ ರೈತರು ಎಚ್ಚರಿಕೆ ನೀಡಿದ್ದಾರೆ.
'ಕೃಷಿ ಚಟುವಟಿಕೆಗಳಿಗೆ ವಿಧಿಸಿರುವ ಜಿಎಸ್‌ಟಿಯನ್ನು ಹಿಂಪಡೆಯಬೇಕು. ಪಿಎಂ- ಕಿಸಾನ್ ಯೋಜನೆಯಲ್ಲಿ ಆದಾಯವನ್ನು ಹೆಚ್ಚಿಸಬೇಕು ಸೇರಿದಂತೆ ಸರ್ಕಾರ ರೈತರ ವಿವಿಧ ಬೇಡಿಕೆಗಳನ್ನು ಮೂರು ತಿಂಗಳೊಳಗೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂದು ಬಿಕೆಎಸ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.
'ಕುಲಾಂತರಿ ಬೆಳೆಗಳ ವಾಣಿಜ್ಯ ಉತ್ಪಾದನೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಬೇಕು, ಕೃಷಿ ಯಂತ್ರೋಪಕರಣಗಳು ಮತ್ತು ಕೀಟನಾಶಕಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕಬೇಕು' ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಇಂದೋರ್‌ನ ರೈತ ನರೇಂದ್ರ ಪಾಟೀದಾರ್ ಒತ್ತಾಯಿಸಿದರು.
'ಕುಲಾಂತರಿ ಬೀಜಗಳು ನಮಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಹಾನಿಕಾರಕ ಎಂದು ಇತರ ದೇಶಗಳಲ್ಲಿನ ಸಂಶೋಧನೆಗಳು ಹೇಳುತ್ತವೆ. ನಾವು ಈ ಬಗ್ಗೆ ಸಂಶೋಧನಾ ವಿವರಗಳನ್ನು ಒದಗಿಸಬೇಕು ಹಾಗೂ ಅವು ವಿಶ್ವಾಸಾರ್ಹವಾಗಿವೆ ಎಂಬುದಕ್ಕೆ ಕೆಲವು ಪುರಾವೆಗಳನ್ನು ನೀಡುವವರೆಗೆ ಕುಲಾಂತರಿ ಬೀಜಗಳನ್ನು ಬಳಸಲು ನಾವು ಸಿದ್ಧರಿಲ್ಲ. ಬಹಳಷ್ಟು ರೈತರು ಹಿಂದಿನಿಂದಲೇ ಕುಲಾಂತರಿ ಬೀಜಗಳನ್ನು ವಿರೋಧಿಸುತ್ತಾ ಬಂದಿದ್ದಾರೆ' ಎಂದು ನಾಗ್ಪುರದ ರೈತ ಅಜಯ್ ಬೋಂದ್ರೆ ಹೇಳಿದರು.
'ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಹಣದುಬ್ಬರದಿಂದ ನಮಗೆ ಯಾವುದೇ ಲಾಭ ದೊರೆಯುತ್ತಿಲ್ಲ. ಸರ್ಕಾರ ವಿನಾಕಾರಣ ಹೈನುಗಾರಿಕೆಯ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಿದ್ದು, ಯಾವುದೇ ಕಾರಣಕ್ಕೂ ಜಿಎಸ್‌ಟಿ ವಿಧಿಸಬಾರದು. ಪ್ರಸ್ತುತ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇವಲ ₹ 6 ಸಾವಿರ ನೀಡುತ್ತಿರುವುದು ರೈತರಿಗೆ ಸಲ್ಲಿಸುವ ಅಗೌರವವಾಗಿದೆ. ರೈತರು ನುರಿತ ಕಾರ್ಮಿಕರಾಗಿದ್ದು ಅವರಿಗೆ ಕನಿಷ್ಠ ₹ 15 ಸಾವಿರವಾದರೂ ನೀಡಬೇಕು' ಎಂದು ಮಧ್ಯಪ್ರದೇಶದ ರೈತ ದಿಲೀಪ್ ಕುಮಾರ್ ಆಗ್ರಹಿಸಿದರು.
'ಸರ್ಕಾರವು ರೈತರ ಮೇಲೆ ಜಿಎಸ್‌ಟಿ ಹೇರಿ ಕಂಪನಿಗಳಿಗೆ ಸಬ್ಸಿಡಿ ನೀಡುತ್ತಿದೆ. ಬೀಜಗಳ ಮೇಲೂ ಜಿಎಸ್‌ಟಿ ವಿಧಿಸುತ್ತಿದ್ದಾರೆ' ಮಹಾರಾಷ್ಟ್ರದ ರಾಯಗಡದ ರೈತ ಪ್ರಮೋದ್ ಆರೋಪಿಸಿದರು.
ಪಂಜಾಬ್, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ರೈತರು ಟ್ರ್ಯಾಕ್ಟರ್, ಮೋಟಾರ್ ಸೈಕಲ್ ಮತ್ತು ಬಸ್ಸುಗಳ ಮೂಲಕ ದೆಹಲಿಗೆ ಬಂದಿದ್ದರು.