ನವದೆಹಲಿ: 'ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕಾಯ್ದುಕೊಂಡಿರುವ ಯಥಾಸ್ಥಿತಿಯನ್ನು ಬದಲಿಸುವ ಚೀನಾದ ಏಕಪಕ್ಷೀಯ ಪ್ರಯತ್ನಕ್ಕೆ ಭಾರತೀಯ ಸೇನೆ ಕಡಿವಾಣ ಹಾಕಲಿದೆ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
'ಇಂಡಿಯಾ ಟುಡೆ' ಹಮ್ಮಿಕೊಂಡಿದ್ದ ಭಾರತ-ಜಪಾನ್ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದ ಅವರು, 'ಗಡಿಯಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ. ಆ ದೇಶಕ್ಕೆ ಪ್ರತ್ಯುತ್ತರ ನೀಡುವ ಉದ್ದೇಶದಿಂದಲೇ ಚೀನಾ ಗಡಿಯಲ್ಲಿ ನಾವೂ ಕೂಡ ಸೇನಾಪಡೆ ನಿಯೋಜಿಸಿದ್ದೇವೆ' ಎಂದು ಹೇಳಿದ್ದಾರೆ.
ಚೀನಾವು ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜೈಶಂಕರ್, 'ಚೀನಾದ ಪ್ರಯತ್ನಗಳನ್ನು ನಾವು ಕಡೆಗಣಿಸಿಲ್ಲ. ಹಾಗೊಮ್ಮೆ ನಿರ್ಲಕ್ಷಿಸಿದ್ದರೆ ನಮ್ಮ ಸೇನಾ ಪಡೆ ಅಲ್ಲೇಕೆ ಹೋಗುತ್ತಿತ್ತು. ರಾಹುಲ್ ಗಾಂಧಿ ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಗಡಿಯಲ್ಲಿ ಸೇನಾ ಪಡೆ ನಿಯೋಜಿಸಿಲ್ಲ. ಪ್ರಧಾನಿ ಮೋದಿ ಅವರ ಆದೇಶದ ಅನುಸಾರ ಈ ನಿರ್ಧಾರ ಕೈಗೊಂಡಿದ್ದೇವೆ' ಎಂದಿದ್ದಾರೆ.
'ಜನ ಏನು ಬೇಕಾದರೂ ಹೇಳುತ್ತಾರೆ. ಅವು ನಂಬಲು ಅರ್ಹವಾಗಿಲ್ಲದಿರಬಹುದು. ಚೀನಾ ಸೇರಿದಂತೆ ಯಾವ ರಾಷ್ಟ್ರವೂ ಎಲ್‌ಎಸಿ ಬಳಿಯ ಯಥಾಸ್ಥಿತಿಗೆ ಭಂಗ ಉಂಟುಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇದು ದೇಶದ ಬಾಧ್ಯತೆ. ನಮ್ಮ ಸೇನಾ ಪಡೆಯ ಕರ್ತವ್ಯ ಹಾಗೂ ಬದ್ಧತೆಯಾಗಿದೆ' ಎಂದು ತಿಳಿಸಿದ್ದಾರೆ.
ಗಡಿ ಬಿಕ್ಕಟ್ಟಿನ ಹೊರತಾಗಿಯೂ ಭಾರತವು ಚೀನಾ ಜೊತೆಗಿನ ವ್ಯಾಪಾರ ವೃದ್ಧಿಸಿಕೊಂಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, 'ಭಾರತವು ಚೀನಾದಿಂದ ಹಲವು ಉತ್ಪನ್ನಗಳನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿದೆ. ಇದು 30 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ' ಎಂದು ಹೇಳಿದ್ದಾರೆ.
ರಾಹುಲ್ ಪದ ಪ್ರಯೋಗಕ್ಕೆ ಆಕ್ಷೇಪ
ತವಾಂಗ್‌ನಲ್ಲಿ ನಡೆದಿದ್ದ ಭಾರತ-ಚೀನಾ ಸೇನಾ ಸಂಘರ್ಷದ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ ಅವರು ಚೀನಾ ಯೋಧರು ನಮ್ಮ ಸೈನಿಕರನ್ನು ಹಿಡಿದು ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ರಾಹುಲ್ 'ಹೊಡೆದಿದ್ದರು' ಎಂಬ ಪದ ಪ್ರಯೋಗಿಸಿರುವುದಕ್ಕೆ ಜೈಶಂಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಸಂಘರ್ಷದ ವೇಳೆ ನಮ್ಮ ಯೋಧರು ಚೀನಾ ಸೈನಿಕರಿಗೆ ದಿಟ್ಟ ಉತ್ತರ ನೀಡಿದ್ದಾರೆ. ಅದನ್ನು ನಾವು ಪ್ರಶಂಸಿಸಬೇಕು. ಸರ್ಕಾರದ ನಿಲುವುಗಳನ್ನು ಟೀಕಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ದೇಶ ಕಾಯುವ ಯೋಧರ ಬಗ್ಗೆ ನೇರ ಅಥವಾ ಪರೋಕ್ಷ ಟೀಕೆ ತರವಲ್ಲ' ಎಂದಿದ್ದಾರೆ.
ಪಾಕ್‌ನಿಂದ ದೊಡ್ಡ ಮಟ್ಟದ ನಿರೀಕ್ಷೆ ಇಲ್ಲ
ಪಾಕಿಸ್ತಾನದಿಂದ ಭಾರತವು ದೊಡ್ಡ ಮಟ್ಟದ ನಿರೀಕ್ಷೆಯನ್ನೇನೂ ಇಟ್ಟುಕೊಂಡಿಲ್ಲ' ಎಂದು ಜೈಶಂಕರ್ ಹೇಳಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನೆಲೆಗಟ್ಟಿನಲ್ಲಿ ವಾಗ್ದಾಳಿ ನಡೆಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಅವರು, 'ಜರ್ದಾರಿ ಹೇಳಿಕೆ ಅನಾಗಕರಿಕವಾದುದ್ದು ಎಂದು ನನ್ನ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಜರ್ದಾರಿ ಅವರನ್ನು ನಾವು ಹೇಗೆ ಕಾಣುತ್ತೇವೆ ಎಂಬುದಕ್ಕೆ ಇದೇ ಸಾಕ್ಷಿ' ಎಂದು ತಿಳಿಸಿದ್ದಾರೆ.