HEALTH TIPS

ಅಂಚೆ ಕಚೇರಿ ಮೂಲಕ ನೀಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಳ

 

             ನವದೆಹಲಿ: ಅಂಚೆ ಕಚೇರಿ ಮೂಲಕ ನೀಡಲಾಗುವ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಶುಕ್ರವಾರ ಹೆಚ್ಚಿಸಿದೆ. ಆದರೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲಿನ ಬಡ್ಡಿ ಜಾಸ್ತಿ ಮಾಡಿಲ್ಲ.

               ರಾಷ್ಟ್ರೀಯ ಉಳಿತಾಯ ಯೋಜನೆ (ಎನ್‌ಎಸ್‌ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್‌ ವಿಕಾಸ ಪತ್ರ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಹೆಚ್ಚು ಮಾಡಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಸಿಗುವ ಬಡ್ಡಿಗೆ ತೆರಿಗೆ ಇದೆ.

                 ಶುಕ್ರವಾರ ಮಾಡಿರುವ ಹೆಚ್ಚಳವನ್ನು ಪರಿಗಣಿಸಿದರೆ, ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿಯನ್ನು ಸತತ ಎರಡನೆಯ ತ್ರೈಮಾಸಿಕದಲ್ಲಿಯೂ ಹೆಚ್ಚಿಸಿದಂತಾಗಿದೆ. ಅಕ್ಟೋಬರ್‌ಗೂ ಮೊದಲು ಸತತ ಒಂಬತ್ತು ತ್ರೈಮಾಸಿಕಗಳ ಕಾಲ, ಅಂದರೆ 27 ತಿಂಗಳುಗಳ ಕಾಲ, ಬಡ್ಡಿ ದರದಲ್ಲಿ ಬದಲಾವಣೆ ಮಾಡಿರಲಿಲ್ಲ. ಈಗಿನ ಹೆಚ್ಚಳವು ಜನವರಿ-ಮಾರ್ಚ್‌ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ.

                 ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೂಪಿಸಿದ ಸುಕನ್ಯಾ ಸಮೃದ್ದಿ ಯೋಜನೆಯ ಬಡ್ಡಿ ದರವನ್ನು ಶೇ 7.6ರಲ್ಲಿ ಕಾಯ್ದುಕೊಳ್ಳಲಾಗಿದೆ. ಪಿಪಿಎಫ್‌ಗೆ ಸಿಗುವ ಬಡ್ಡಿ ಶೇ 7.1ರಷ್ಟೇ ಇರಲಿದೆ.

                  2022ರ ಮೇ ತಿಂಗಳ ನಂತರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಒಟ್ಟು ಶೇಕಡ 2.25ರಷ್ಟು ಜಾಸ್ತಿ ಮಾಡಿದೆ. ಈಗ ರೆಪೊ ದರವು ಶೇ 6.25ಕ್ಕೆ ತಲುಪಿದೆ. ಇದರ ಪರಿಣಾಮವಾಗಿ ಬ್ಯಾಂಕ್‌ಗಳು ತಮ್ಮ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿವೆ.

                             'ಬೇರೆಯದಕ್ಕೆ ಹೋಲಿಸಿದರೆ ಗೌಣ'
         
: 'ಸಣ್ಣ ಉಳಿತಾಯ ಯೋಜನೆಗಳ ಪೈಕಿ ಕೆಲವು ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಿರುವುದು ನಿಶ್ಚಿತ ಆದಾಯ ಬಯಸುವವರಿಗೆ ಸಂತಸ ತರಬಹುದು. ಆದರೆ, ಹೆಚ್ಚಳವಾದ ನಂತರದ ಬಡ್ಡಿ ದರವೂ, ಇತರ ಹೂಡಿಕೆ ಉತ್ಪನ್ನಗಳಾಗಿರುವ ಮ್ಯೂಚುವಲ್‌ ಫಂಡ್‌, ಷೇರುಗಳು, ಇಟಿಎಫ್‌ಗಳು ನೀಡಬಹುದಾದ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಗೌಣ' ಎಂದು ಆದಾಯ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಹೇಳಿದರು.

          ಈಗಿನ ಏರಿಕೆಯು ಹಿರಿಯ ನಾಗರಿಕರಿಗೆ ಹೆಚ್ಚಿನ ಸಮಾಧಾನ ತಂದಿದೆ. ನಿಶ್ಚಿತ ಆದಾಯವನ್ನು ನೆಚ್ಚಿಕೊಂಡವರಿಗೆ ಕೂಡ ಇದು ಸಮಾಧಾನ ಮೂಡಿಸುವಂಥದ್ದು. ಈಗಿನ ಏರಿಕೆಯು ಹಣದುಬ್ಬರದ ಹೆಚ್ಚಳದಿಂದ ಆದ ಪರಿಣಾಮಗಳನ್ನು ತುಸು ಮಟ್ಟಿಗೆ ನಿಭಾಯಿಸಲು ನೆರವು ಕೊಡಬಹುದು ಎಂದು ಚಾರ್ಟರ್ಡ್‌ ಅಕೌಂಟೆಂಟ್ ಬಿ.ಇ. ಕುಮಾರ್‌ ಪ್ರಸಾದ್ ಹೇಳಿದರು.

             ಆದರೆ, ಈ ಹೆಚ್ಚಳದ ನಂತರದಲ್ಲಿಯೂ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲೇ ಹೆಚ್ಚಿನ ಲಾಭ ಸಿಗುತ್ತದೆ ಎಂಬುದು ನಿಜ ಎಂದು ಅವರು ತಿಳಿಸಿದರು.

       


ಬಡ್ಡಿ ಹೆಚ್ಚಳವು ಹಣದುಬ್ಬರ ಏರಿಕೆಯಿಂದ ಬಸವಳಿದಿದ್ದವರಿಗೆ ಸಮಾಧಾನ ಮೂಡಿಸುವಂಥದ್ದು ಎಂದು ಮಾಜಿ ಬ್ಯಾಂಕರ್‌ ಹಾಗೂ ಹಣಕಾಸು ಸಲಹೆಗಾರ ವಸಂತ ಜಿ. ಹೆಗಡೆ ಹೇಳಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries