ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ಹಾಗೂ 2023ರಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದು, ಆಯಾ ರಾಜ್ಯಗಳ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಕೆಲ ಹೊಸ ಮುಖಗಳಿಗೆ ಆದ್ಯತೆ ನೀಡುವ ಲೆಕ್ಕಾಚಾರದ ಬಗ್ಗೆ ತಿಳಿದುಬಂದಿದೆ.
ಈ ವಿಚಾರವಾಗಿ ಪಿಎಂ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಆರ್ಎಸ್ಎಸ್ನ ಪ್ರಮುಖ ಮುಖಂಡರ ಜತೆಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
ಮುಂಬರುವ ಬಜೆಟ್ ಅಧಿವೇಶನಕ್ಕೆ ಮುನ್ನ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳಿದ್ದು, ಕೆಲ ಸಚಿವರಿಗೆ ರೋಟೇಶನ್ ಆಧಾರದಲ್ಲಿ ಬೇರೆ ಖಾತೆಗಳ ಹಂಚಿಕೆ ಆಗುವ ಸಾಧ್ಯತೆಗಳಿವೆ. ಮಕರ ಸಂಕ್ರಾಂತಿ ಮತ್ತು ಬಜೆಟ್ ಅಧಿವೇಶನದ ನಡುವಿನ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಹಲವು ಸಚಿವರ ಮೌಲ್ಯಮಾಪನ ಮಾಡಲಾಗಿದ್ದು, ನಿಷ್ಕ್ರಿಯ ಅಥವಾ ನಿರೀಕ್ಷಿತ ನಿರ್ವಹಣೆ ತೋರದ ಸಚಿವರ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಈಗಾಗಲೇ ಇರುವ ಕೆಲ ಸಚಿವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡುತ್ತಾರೋ ಅಥವಾ ಹೆಚ್ಚುವರಿ ಖಾತೆಗಳನ್ನು ರಾಜ್ಯದ ಕೋಟಾಕ್ಕೆ ಸೇರಿಸುತ್ತಾರೋ ಕಾದು ನೋಡಬೇಕು. ಸದ್ಯ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಟಿ ಸಚಿವ ರಾಜೀವ್ ಚಂದ್ರಶೇಖರ್ ಸೇರಿಸಿ 6 ಮಂದಿ ರಾಜ್ಯದ ಕೋಟಾದಲ್ಲಿ ಕೇಂದ್ರ ಸಚಿವರಾಗಿದ್ದಾರೆ. ಕರ್ನಾಟಕ ಚುನಾವಣೆ ಬಳಿಕ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ಗಢ, ಹರಿಯಾಣ ರಾಜ್ಯಗಳ ಚುನಾವಣೆಯಿದ್ದು, ಆ ರಾಜ್ಯಗಳ ಸಂಸದರಿಗೂ ಪುನರ್ ರಚನೆಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿದೆ.