ಮುಂಬೈ: ಕಾನೂನಿನ ಪ್ರಕ್ರಿಯೆ ಹಾಗೂ ಸ್ವಾತಂತ್ರ್ಯದ ರಕ್ಷಣೆ ವಿಷಯದಲ್ಲಿ ಸಾರ್ವಜನಿಕರ ವಿಶ್ವಾಸ ನ್ಯಾಯಾಂಗದಲ್ಲಿ ಅಡಗಿದೆ ಅದೇ ಸ್ವಾತಂತ್ರ್ಯದ ರಕ್ಷಕನಾಗಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಮುಂಬೈನಲ್ಲಿ ಅಶೋಕ್ ಹೆಚ್ ದೇಸಾಯಿ ಮೆಮೊರಿಯಲ್ ನಲ್ಲಿ ಉಪನ್ಯಾಸ ನೀಡಿ ಮಾತನಾಡಿರುವ ಸಿಜೆಐ, ಬಾರ್ ಕೌನ್ಸಿಲ್ ನ ಸದಸ್ಯರ ಮೂಲಕ ಸ್ವಾತಂತ್ರ್ಯದ ದೀಪ ಇಂದಿಗೂ ಪ್ರಜ್ವಲಿಸುತ್ತಿದೆ ಎಂದು ಹೇಳಿದ್ದಾರೆ.
ಜನಸಾಮಾನ್ಯರ ಸ್ವಾತಂತ್ರ್ಯದ ರಕ್ಷಕರೆಂದು ನಮ್ಮನ್ನು ನಂಬಬೇಕು ಎಂಬ ಸಾಲುಗಳಿಗೆ ಪುಷ್ಟಿ
ನೀಡುವ ಉದಾಹರಣೆಯ ಪ್ರಕರಣವೊಂದನ್ನು ಸಿಜೆಐ ಉಲ್ಲೇಖಿಸಿದ್ದು, ಸುಪ್ರೀಂ ಕೋರ್ಟ್
ಮಧ್ಯಪ್ರವೇಶಿಸದೇ ಇದ್ದಿದ್ದರೆ, ಕಳ್ಳತನಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ 18
ವರ್ಷಗಳ ಕಾಲ ಜೈಲಿನಲ್ಲಿರುತ್ತಿದ್ದ ಎಂದು ಸಿಜೆಐ ಹೇಳಿದ್ದಾರೆ.
ಮೇಲ್ನೋಟದಲ್ಲಿ ನಿರುಪದ್ರವಿ ಪ್ರಕರಣವೊಂದರಲ್ಲಿ ವಿದ್ಯುತ್ ಗೆ ಸಂಬಂಧಿಸಿದ
ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಗೆ ಸೆಷನ್ಸ್ ನ್ಯಾಯಾಲಯ 2 ವರ್ಷಗಳ
ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅದರಲ್ಲಿ ಆತನ ವಿರುದ್ಧ ದಾಖಲಾಗಿದ್ದ ಸಣ್ಣ ಸಣ್ಣ 9
ಬೇರೆ ಬೇರೆ ಪ್ರಕರಣಗಳಲ್ಲಿ ಪ್ರತಿ ಪ್ರಕರಾಣಕ್ಕೂ 2 ವರ್ಷಗಳೆಂದರೆ 18 ವರ್ಷ ಜೈಲು
ಶಿಕ್ಷೆ ಎಂಬ ಅರ್ಥ ಬರುತ್ತಿತ್ತು. ಆದರೆ ಈ ಬಗ್ಗೆ ಸೆಷನ್ಸ್ ನ್ಯಾಯಾಲಯ ಸ್ಪಷ್ಟತೆ
ನೀಡಿರಲಿಲ್ಲ. ಈ ವಿಷಯದಲ್ಲಿ ಸೆಷನ್ಸ್ ನ್ಯಾಯಾಲಯ ಸಿಆರ್ ಪಿಸಿಯ ಸೆಕ್ಷನ್ 427 ರ
ಪ್ರಕಾರ ಜೈಲು ಶಿಕ್ಷೆ ಅವಧಿಯ ಬಗ್ಗೆ ಸ್ಪಷ್ಟತೆ ನೀಡಿಲ್ಲವಾದ್ದರಿಂದ ನಾವೂ ಏನೂ ಮಾಡಲು
ಸಾಧ್ಯವಿಲ್ಲ ಎಂದು ಹೈಕೋರ್ಟ್ ಸಹ ಅಸಹಾಯಕತೆ ವ್ಯಕ್ತಪಡಿಸಿತ್ತು ಎಂದು ಸಿಜೆಐ
ಹೇಳಿದ್ದಾರೆ.