ತಿರುವನಂತಪುರ: ಮಹಿಳೆಯೊಬ್ಬರನ್ನು ಆಕೆಯೊಂದಿಗೆ ಸಹಜೀವನ ನಡೆಸಿದ್ದ ವ್ಯಕ್ತಿಯೇ ಕೊಲೆ ಮಾಡಿರುವ ಅಮಾನುಷ ಘಟನೆ ತಿರುವನಂತಪುರದಲ್ಲಿ ಗುರುವಾರ ಬೆಳಗ್ಗೆ ವರದಿಯಾಗಿದೆ.
ಮೃತ ಮಹಿಳೆಯನ್ನು ನನ್ನಿಯೋಡೆಯ ಸಿಂಧೂ (50) ಎಂದು ಗುರುತಿಸಲಾಗಿದೆ.
ಪಟ್ಟಣಂತಿಟ್ಟದ ಆರೋಪಿ ರಾಕೇಶ್‌ನನ್ನು (46) ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖಾ ಮಾಹಿತಿ ಪ್ರಕಾರ, ಸಿಂಧು ಹಾಗೂ ರಾಕೇಶ್ ಬೇರೆ ಬೇರೆ ಮದುವೆಯಾಗಿದ್ದು, ತಮ್ಮದೇ ಕುಟುಂಬಗಳನ್ನು ಹೊಂದಿದ್ದಾರೆ. ಹೀಗಿದ್ದರೂ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಕೆಲವು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದ ಅವರು ಇತ್ತೀಚೆಗೆ ಬೇರೆಯಾಗಿದ್ದರು. ಇದು ಕೊಲೆಗೆ ಕಾರಣ ಎನ್ನಲಾಗಿದೆ.
ಆರೋಪಿಯು ಮಹಿಳೆಯ ಕುತ್ತಿಗೆ ಮತ್ತು ತಲೆಗೆ ಕತ್ತಿಯಿಂದ ಹಲ್ಲೆ ನಡೆಸಿದ. ಸಂತ್ರಸ್ತೆ ರಸ್ತೆ ಮೇಲೆ ಕುಸಿದು ಬಿದ್ದ ನಂತರವೂ 'ನನ್ನ ಜೀವನ ಹಾಳು ಮಾಡಿದೆ' ಎಂದು ಆರೋಪಿಸುತ್ತಾ ಹಲವು ಬಾರಿ ಹಲ್ಲೆ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಈ ಪ್ರಕರಣ ನಡೆದಿದೆ. ಈ ವೇಳೆ ಜನರು ಹಾಗೂ ವಾಹನಗಳ ಸಂಚಾರ ಎಂದಿನಂತೆ ಇತ್ತು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಂಧೂ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಆರೋಪಿಯನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.
ಸಿಂಧೂ ಅವರು ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೊಲೆ ಮಾಡಲಾಗಿದೆ.