ನವದೆಹಲಿ: 'ಪ್ರವಾಸೋದ್ಯಮ ಸಚಿವಾಲಯವು ರಾಜ್ಯಗಳಲ್ಲಿರುವ ಆದಾಯ ಸೃಷ್ಟಿಸಬಲ್ಲ ಪ್ರವಾಸಿ ತಾಣಗಳನ್ನು ಗುರುತಿಸುವ ಜೊತೆಗೆ ಅವುಗಳನ್ನು ಅಭಿವೃದ್ಧಿಪಡಿಸಬೇಕು' ಎಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಈ ಸಮಿತಿ ಮಂಗಳವಾರ ತನ್ನ 331ನೇ ವರದಿಯನ್ನು ಸಲ್ಲಿಸಿದ್ದು, 'ಭಾರತವು ಪ್ರಯಾಣ, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಅಗತ್ಯ ಬಂಡವಾಳ ಒದಗಿಸಿದರೂ ಕೂಡ 2021ರಲ್ಲಿ ಅದರ ಇಂಟರ್‌ನ್ಯಾಷನಲ್ ಟೂರಿಸ್ಟ್ ಅರೈವಲ್ಸ್ (ಐಟಿಎ) ಪಾಲು ಶೇ 1.59ರಷ್ಟಿದೆ' ಎಂದು ತಿಳಿಸಿದೆ.
'ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ದೇಶಗಳ ನಡುವೆ ತೀವ್ರ ಪೈಪೋಟಿ ಇದೆ. ಹೀಗಾಗಿ ಭಾರತವು ಮಾರುಕಟ್ಟೆ ತಜ್ಞರನ್ನು ನೇಮಿಸಿಕೊಳ್ಳುವ ಮೂಲಕ ಉತ್ತಮ ಮಾರುಕಟ್ಟೆ ತಂತ್ರಗಾರಿಕೆ ರೂಪಿಸುವುದು ತುಂಬಾ ಅಗತ್ಯ. ಹಾಗಾದಾಗ ಮಾತ್ರ ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು' ಎಂದು ವರದಿಯಲ್ಲಿ ಹೇಳಲಾಗಿದೆ.
'ಸಚಿವಾಲಯದ ವೆಬ್‌ಸೈಟ್ ಅನ್ನು ಇನ್ನಷ್ಟು ಆಕರ್ಷಕ ಹಾಗೂ ಬಳಕೆದಾರರ ಸ್ನೇಹಿಯಾಗಿ ಮರು ವಿನ್ಯಾಸಗೊಳಿಸುವತ್ತಲೂ ಸಚಿವಾಲಯ ಹೆಚ್ಚಿನ ಗಮನ ಹರಿಸಬೇಕು' ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.