ತೆಲಂಗಾಣ: ಎಷ್ಟೇ ಜಾಗೃತಿ ಮೂಡಿಸಿದರು, ಕಠಿಣ ನಿಯಮ ಹೇರಿದರೂ ನಗರದ ಬೀದಿ ಬದಿ ಮೂತ್ರ ಮಾಡಿ ಬೇಜವಾಬ್ದಾರಿ ಮೆರೆಯುತ್ತಾರೆ ಜನರು. 'ಇಲ್ಲಿ ಮೂತ್ರ ಮಾಡಿದರೆ ದಂಡ ವಿಧಿಸಲಾಗುವುದು' ಎಂಬ ಬೋರ್ಡ್ ಇದ್ದರೂ, ಕ್ಯಾರೇ ಎನ್ನದ ಕೆಲವು ಮಂದಿ ಅಲ್ಲಿಯೇ ಮೂತ್ರ ಮಾಡಿ ಬರುತ್ತಾರೆ!
ಇಂತಹ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ಮೂಕ ಪ್ರಾಣಿಗಳಿಗೆ ನಿಯಮ ಹೇರಲು ವ್ಯವಸ್ಥೆ ಮುಂದಾದಂತಿದೆ!
ತೆಲಂಗಾಣದ ಭದ್ರಾದಿ ಕೊತ್ತಗುಡೆಂ ಜಿಲ್ಲೆಯ ಎಸ್ಸಿಸಿಎಲ್ ಕಲ್ಲಿದ್ದಲು ಕಂಪೆನಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದೆ ಎಂದು, ಅದರ ಮಾಲೀಕನಿಗೆ ನೂರು ರೂಪಾಯಿ ದಂಡ ವಿಧಿಸಲಾಗಿದೆ.
ರೈತ ಸುಂದರ್ ಲಾಲ್ ಎಂಬಾತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಎಸ್ಸಿಸಿಎಲ್ ಕಲ್ಲಿದ್ದಲು ಕಂಪೆನಿ ಇನ್ನೂ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿ, ಕಂಪೆನಿಯ ಮುಂದೆ ಪ್ರತಿಭಟನೆ ಮುಂದಾಗಿದ್ದ. ಈತ ತನ್ನ ಊರಿನಿಂದ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿ ಬಂದಿದ್ದ. ಹೀಗಾಗಿ ರೈತ ಪ್ರತಿಭಟನೆ ನಡೆಸುವಾಗ ಎತ್ತಿನ ಗಾಡಿಯೂ ಅಲ್ಲೇ ಇತ್ತು. ಈ ವೇಳೆ ಎತ್ತು ಕಂಪೆನಿಯ ಗೇಟಿನ ಬಳಿ ಮೂತ್ರ ಮಾಡಿದೆ.
ಪ್ರತಿಭಟನೆ ಮಾಡಿದ್ದ ರೈತನಿಗೆ ಸರಿಯಾದ ಶಾಸ್ತಿ ಮಾಡಬೇಕೆಂಬ ಹಠದಲ್ಲಿದ್ದ ಕಂಪೆನಿ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಎತ್ತು ಮೂತ್ರ ಮಾಡುವ ದೃಶ್ಯವನ್ನು ಕೋರ್ಟ್ಗೆ ಸಲ್ಲಿಸಿದೆ. ನಂತರ ರೈತನಿಗೆ ದಂಡ ವಿಧಿಸುವಂತೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಇದಾಗುತ್ತಿದ್ದಂತೆ ಪರಿಶೀಲಿಸಿದ ಕೋರ್ಟ್, ಕಂಪೆನಿಯ ಮುಂದಿನ ಸ್ವಚ್ಛವಾದ ರಸ್ತೆಯಲ್ಲಿ ಎತ್ತು ಮೂತ್ರ ಮಾಡಿರುವುದು ತಪ್ಪು. ಇದಕ್ಕೆ ಎತ್ತಿನ ಮಾಲೀಕನೇ ಹೊಣೆಯಾಗಿದ್ದೇನೆ ಎಂದು ಹೇಳಿ ನೂರು ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುವುದು ವರದಿಯಾಗಿದೆ.