ಕುಂಬಳೆ: ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರು ನೆಲ ಕುಂಬ್ಳೆಯ ಶೇಡಿಕಾವಿನಲ್ಲಿ ವರ್ಷಂಪ್ರತಿ ಯಕ್ಷೋತ್ಸವ ಜರುಗಿ, ಈ ನೆಲದಿಂದ ಹೊಸ ಪ್ರತಿಭೆಗಳು ಉದಯಿಸಿ ಯಕ್ಷಗಾನಕ್ಕೆ ತೆಂಕಣ ತವರಿನ ಕೊಡುಗೆಯಾಗಬೇಕು. ತನ್ಮೂಲಕ ಗತಪರಂಪರೆ ಕಾಪಾಡಬೇಕು. ಈ ದೃಷ್ಟಿಯಲ್ಲಿ ಕಣಿಪುರ ಮಾಸಪತ್ರಿಕೆ ಆಯೋಜಿಸಿದ ಪಾರ್ತಿಸುಬ್ಬನ ನೆಲದ ಯಕ್ಷೋತ್ಸವ ಅರ್ಥಪೂರ್ಣ ಮತ್ತು ಈ ನೆಲದ ಸಂಸ್ಕøತಿಯ ಸಂಕೇತ ಎಂದು ಕರ್ನಾಟಕ ಲೋಕಸೇವಾ ಆಯೋಗದ ನಿಕಟ ಪೂರ್ವ ಅಧ್ಯಕ್ಷ, ಕಲಾಪೋಷಕ ಡಾ. ಟಿ. ಶಾಮ ಭಟ್ ನುಡಿದರು.
ಪಾರ್ತಿಸುಬ್ಬನ ತವರು ನೆಲದಲ್ಲಿ ರಂಗಸ್ಥಳದ ಮುಂದೆ ಆಳೆತ್ತರದ ಪಾರ್ತಿಸುಬ್ಬನ ತೈಲಚಿತ್ರವನ್ನಿರಿಸಿ ಅದರ ಮುಂದೆ ಗಣ್ಯರೆಲ್ಲರೂ ನಮಿಸಿ, ದೀಪಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
ಕುಂಬಳೆಯಲ್ಲಿ ಯಕ್ಷಗಾನದ ವಾತಾವರಣ ಹಸಿರಾಗಿರಿಸುವ ಪ್ರಯತ್ನ ಶ್ಲಾಘನೀಯ, ಇದನ್ನು ಬೆಂಬಲಿಸಬೇಕು ಎಂದರು. ಯಕ್ಷಗಾನ ಕಲೆ ಮತ್ತು ಕಲಾವಿದರ ಪಾಲಿಗೆ ಕಾಮಧೇನುವಾಗಿ ನೆಲಮೂಲ ಸಂಸ್ಕøತಿಯ ಮಹಾಪೋಷಕರಾಗಿ ಅನನ್ಯ ಕೊಡುಗೆ ಇತ್ತ ಶಾಮ ಭಟ್ಟರನ್ನು ಸಮಾರಂಭದಲ್ಲಿ ಕಣಿಪುರ ಮಾಸಪತ್ರಿಕೆ ವತಿಯಿಂದ ಗೌರವಪೂರ್ವಕ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಂಬ್ಳೆ ರಘುನಾಥ ಪೈ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ವೇದ ವಿದ್ವಾಂಸ, ಧಾರ್ಮಿಕ ಚಿಂತಕ, ಪ್ರವಚಕ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಮಾತನಾಡಿ ತೆಂಕುತಿಟ್ಟಿನ ತವರಿನಿಂದ ಯಕ್ಷಗಾನಕ್ಕೆ ಕಣಿಪುರ ಮಾಸಪತ್ರಿಕೆ ನೀಡಿದ ಕೊಡುಗೆ ಅತ್ಯಮೂಲ್ಯ. ಅದು ಈ ನೆಲದ ಮಹೋನ್ನತ ಕೊಡುಗೆ. ಪ್ರಸ್ತುತ ಕೊರೋನ್ನತ್ತರದಲ್ಲಿ ಉಳಿದ ಯಕ್ಷಗಾನ ಪತ್ರಿಕೆಗಳೆಲ್ಲ ಸ್ಥಗಿತಗೊಂಡಿರುವಾಗ ಕಣಿಪುರ 11ನೇ ವರ್ಷಕ್ಕೆ ಮುನ್ನಡೆಯುತ್ತಿರುವುದು ಕುಂಬಳೆ ಸೀಮೆಯ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಕುಂಬ್ಳೆ ಸೀಮೆಯ ಯಕ್ಷಪ್ರತಿಭೆಗಳಾದ ಕಿಶನ್ ಅಗ್ಗಿತ್ತಾಯ, ಸ್ವಸ್ತಿಕ್ ಪಳ್ಳತ್ತಡ್ಕ ಇವರಿಗೆ ಯಕ್ಷಕ್ಷೇತ್ರ ಪ್ರತಿಷ್ಠಾನ ಮಂಗಳೂರು ನೇತೃತ್ವದಲ್ಲಿ ಎಸ್ ಬಿ ಗ್ರೂಪ್ ಪ್ರಾಯೋಜಿತ ದಿ. ಕುಂಬ್ಳೆ ಸುಂದರ ರಾವ್ ಪ್ರಶಸ್ತಿ ಮತ್ತು ದಿ. ಕುಂಬ್ಳೆ ಚಂದು ಪ್ರಶಸ್ತಿ ನೀಡಲಾಯಿತು. ಮದ್ದಳೆಯ ಬಾಲಪ್ರತಿಭೆ ಮಾ. ಕೃಷ್ಣ ಚೈತನ್ಯ ಚೇರಾಲು ಇವರಿಗೆ 'ಕಣಿಪುರ'ದ ವತಿಯಿಂದ ದಿ. ಪುತ್ತೂರು ಶ್ರೀಧರ ಭಂಡಾರಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ತಲಾ 5ಸಾವಿರ ನಗದು ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಉದಯೋನ್ಮುಖ ಕಲಾಪ್ರತಿಭೆಗಳಾದ ಅನಘ್ರ್ಯ ರತ್ನ ಪೆರುವಡಿ, ಸ್ಮøತಿ. ಎಂ. ಮಾಯ್ಲೆಂಗಿ, ಶ್ರಾವಣಿ ಕಾಟುಕುಕ್ಕೆ, ಸ್ಪೂರ್ತಿ ಕಲ್ಲೂರಾಯ ಮಧೂರು, ಪ್ರೀತಿ ಕಲ್ಲೂರಾಯ ಮಧೂರು, ಮಾ. ಅದೈತ್ ಕನ್ಯಾನ, ಶ್ರುತಿಕಲಾ ಚೇರಾಲು ಇವರಿಗೆ ಕಣಿಪುರ ಯಕ್ಷಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯಕ್ಷಕ್ಷೇತ್ರ ಪ್ರತಿಷ್ಠಾನ ಮಂಗಳೂರು ಇದರ ರಾಘವೇಂದ್ರ ಕುಂಬ್ಳೆ, ಕಾಸರಗೋಡು ಐ.ಎಂ. ಎ ನಿಕಟ ಪೂರ್ವ ಅಧ್ಯಕ್ಷ ಡಾ. ನಾರಾಯಣ ನಾಯ್ಕ್, ಡಾ. ಕಿಶೋರ್ ಕುಂಬ್ಳೆ ಮತ್ತು ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಕ ಗೋವಿಂದ ಭಟ್ ಅತಿಥಿಗಳಾಗಿ ಪಾಲ್ಗೊಂಡರು. ಅಶೋಕ ಕುಂಬ್ಳೆ ಸ್ವಾಗತಿಸಿದರು. ಯಕ್ಷೋತ್ಸವ ಸಂಚಾಲಕ ಎಂ. ನಾ. ಚಂಬಲ್ತಿಮಾರ್ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷೋತ್ಸವ ಸಮಿತಿ ಅಧ್ಯಕ್ಷ ನಾಗೇಶ್ ಕಾರ್ಳೆ ವಂದಿಸಿದರು. ಬಳಿಕ ಹನುಮಗಿರಿ ಮೇಳದವರಿಂದ ಭಾರೀ ಜನಸಮಕ್ಷಮದ ಮುಂದೆ ಶ್ರೀರಾಮ ಕಾರುಣ್ಯ ಪ್ರಸಂಗದ ಬಯಲಾಟ ಜರುಗಿತು.