ತಿರುವನಂತಪುರಂ: ಹಾಸಿಗೆ ಹಿಡಿದ ವ್ಯಕ್ತಿಯ ಹೆಸರಲ್ಲಿ ಹಣ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಕೇಬಲ್ ಟಿವಿಯ ಮಾಲೀಕ ಮತ್ತು ಉದ್ಯೋಗಿಗಳ ವಿರುದ್ಧ ಕೇರಳದ ಪೋಥೆನ್‌ಕೋಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಟ್ಟಿಂಗಲ್ ಮೂಲದ ವಿಸ್ಮಯ ನ್ಯೂಸ್ ಮಾಲೀಕ ರಜನೀಶ್, ಆಯಂಕರ್ ರಜಿತ್ ಕಾರ್ಯಾತಿಲ್, ಉದ್ಯೋಗಿ ಅನೀಶ್ ಮತ್ತು ಅವರ ಪತ್ನಿ ರಮ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ.
ವೆಂಗಾಡ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶೀಬಾ ಎಂಬುವರು ದಾಖಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶೀಬಾ ಅವರ ಸಹೋದರ ಶಿಜು ಅವರು 2018 ರಲ್ಲಿ ಕಟ್ಟಡದಿಂದ ಬಿದ್ದು ಬೆನ್ನು ಮತ್ತು ಕುತ್ತಿಗೆಗೆ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೀಬಾ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣ ಚಾನೆಲ್ ಸಹಾಯ ಮಾಡಲು ಮುಂದಾಯಿತು. ಅಕ್ಟೋಬರ್ 13 ರಂದು ಅನೀಶ್ ಮತ್ತು ರಂಜಿತ್ ವೈದ್ಯಕೀಯ ಚಿಕಿತ್ಸೆಗೆ ನೆರವು ಕೊಡಿಸುವುದಾಗಿ ನಂಬಿಸಿ, ಮನೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿದರು. ಅಲ್ಲದೆ, ಕುಟುಂಬದಿಂದ ಎರಡು ಬಾರಿ 17,000 ರೂ. ಸಂಗ್ರಹಿಸಿದರು. ಚಾನೆಲ್ ಹಾಗೂ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾದ ಬಳಿಕ ಶೀಬಾ ಅವರ ಖಾತೆಗೆ ಒಂದೂವರೆ ಲಕ್ಷ ರೂಪಾಯಿ ಜಮಾ ಆಯಿತು. ಆದರೆ, ನನ್ನನ್ನು ಬೆದರಿಸಿ 1 ಲಕ್ಷದ 30 ಸಾವಿರ ರೂ. ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಶೀಬಾ ದೂರಿದ್ದಾರೆ.
ದೂರಿನನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.