ನವದೆಹಲಿ:ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷರ ಕಚೇರಿಯ ಸಮನ್ವಯಾಧಿಕಾರಿ ಗೌರವ್ ಪಾಂಡಿ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಮನ್ವಯಾಧಿಕಾರಿಯಾಗಿ ಅವರ ಟ್ವೀಟರ್ ಖಾತೆ ನಿರ್ವಹಿಸುತ್ತಿರುವ ಗೌರವ್ ಪಾಂಡಿ ವಾಜಪೇಯಿ ಅವರು ಬ್ರಿಟಿಷರ ಪರವಾಗಿದ್ದರು ಎಂದು ಆರೋಪಿಸಿದ್ದರು.
ಪಕ್ಷದ ನಾಯಕರು ಮಾಜಿ ಪ್ರಧಾನಿ ವಿರುದ್ಧ ನಿಂದನೆಯ ಪದಗಳನ್ನು ಬಳಸುತ್ತಿರುವಾಗ ರಾಹುಲ್ ಗಾಂಧಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸುವ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ಆ ಟ್ವೀಟ್ ನ್ನು ಡಿಲೀಟ್ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಮಹಾತ್ಮ ಗಾಂಧಿ ಮತ್ತು ವಾಜಪೇಯಿ ಸೇರಿದಂತೆ ಅನೇಕ ಮಾಜಿ ಪ್ರಧಾನಿಗಳ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು. ಪಾಂಡಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಒತ್ತಾಯಿಸಿದ್ದಾರೆ.
ಒಂದು ಕಡೆ ರಾಹುಲ್ ವಾಜಪೇಯಿ ಸಮಾಧಿಗೆ ಗೌರವ ನಮನ ಸಲ್ಲಿಸುತ್ತಾರೆ, ಮತ್ತೊಂದೆಡೆ ಅವರ ಪಕ್ಷದ ನಾಯಕರು ಮಾಜಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದ ಬಳಸುತ್ತಾರೆ. ರಾಹುಲ್ ಗಾಂಧಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಮತ್ತೋರ್ವ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.