ನವದೆಹಲಿ: ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿರುವ ಮಹಿಳೆಯನ್ನು ಮನೆಯಿಂದ ಹೊರ ಹಾಕುವುದಕ್ಕೆ ತಡೆ ಒಡ್ಡುವ ಅವಕಾಶವು ಕೌಟುಂಬಿಕ ದೌರ್ಜನ್ಯ ತಡೆ ಕಾನೂನಿನಲ್ಲಿ ಇರುವುದನ್ನು ಪ್ರಶ್ನಿಸಿ 70 ವರ್ಷದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯವು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ.
'ಸೊಸೆಯಿಂದಾಗಿ ನಿರಂತರವಾಗಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇನೆ. ಆದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 19 (1)ರ ಅನ್ವಯ ಸೊಸೆಗೆ 'ನಿವಾಸದ ಹಕ್ಕು' ಇದೆ ಎಂದು ಹೇಳಿದ ಕೆಳ ಹಂತದ ನ್ಯಾಯಾಲಯವು ನನ್ನ ಅರ್ಜಿಯನ್ನು ತಿರಸ್ಕರಿಸಿತು' ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಹಾಗೂ ಸುಬ್ರಮಣ್ಯಂ ಪ್ರಸಾದ್ ಅವರ ಪೀಠವು ಈ ಸೂಚನೆ ನೀಡಿದೆ. ಮಹಿಳೆಯ ಸೊಸೆಗೂ ನೋಟಿಸ್ ನೀಡಲಾಗಿದೆ.
ಹಿರಿಯ ವಕೀಲೆ ರೆಬೆಕಾ ಜಾನ್ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಿಸಿದ್ದು ಏಪ್ರಿಲ್ 18ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.
ಮಹಿಳೆಯ ಅರ್ಜಿಯಲ್ಲಿ ಏನಿದೆ?
ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ಮಾಡುವ ಉದ್ದೇಶವನ್ನು ಕಾಯ್ದೆಯು ಹೊಂದಿದೆ. ಆದರೆ, ಇನ್ನೊಬ್ಬ ಮಹಿಳೆಯ ದೌರ್ಜನ್ಯದಿಂದ ನೋವುಣ್ಣುತ್ತಿರುವ ಸಂತ್ರಸ್ತ ಮಹಿಳೆಗೆ ಈ ಕಾಯ್ದೆಯ ಸೆಕ್ಷನ್ 19 (1) ತೊಡಕಾಗಿದೆ. ಆದ್ದರಿಂದ ಈ ಸೆಕ್ಷನ್ ಅಸಾಂವಿಧಾನಿಕ ಹಾಗೂ ತಾರತಮ್ಯದಿಂದ ಕೂಡಿದೆ.
ಸೊಸೆಯನ್ನು ಮನೆಯಿಂದ ಹೊರಹಾಕಲು ನ್ಯಾಯಾಲಯವು ನಿರ್ದೇಶನ ನೀಡಬೇಕು. ನನ್ನ ಮತ್ತು 76 ವರ್ಷದ ನನ್ನ ಪತಿಯನ್ನು ಸೊಸೆ ಬೆದರಿಸುತ್ತಿದ್ದಾರೆ. ಇಬ್ಬರಿಗೂ ಹಿಂಸೆ ನೀಡುತ್ತಿದ್ದಾಳೆ. ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದಾರೆ
ಅಪರಾಧಿಯ ಲಿಂಗವನ್ನು ಗಮನಿಸಿ ಅತಾರ್ಕಿಕ ವರ್ಗೀಕರಣವನ್ನು ಮಾಡಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ.