ನವದೆಹಲಿ: ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಭಾರತೀಯರು ಜಾಗರೂಕರಾಗಿರಬೇಕು ಎಂದು ಕೋವಿಡ್-19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎನ್.ಕೆ ಅರೋರಾ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೆ ಚೀನಾದಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಚೀನಾದ ಹೊಸ ಉಪ ತಳಿಯ ಬಗ್ಗೆ ನಿಗಾ ವಹಿಸಲಾಗಿದೆ. ಈ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಅರೋರಾ ಮಾಹಿತಿ ನೀಡಿದರು.
ನಾವು ಕೊಳಚೆ ನೀರು, ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳ ಮಾದರಿಗಳು ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬರುವವರ ಮಾದರಿಗಳನ್ನು ಸ್ವೀಕರಿಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಚೀನಾದಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದೇಶದಲ್ಲೂ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಅವರು ಪುನರುಚ್ಚರಿಸಿದರು.
ಚೀನಾದಲ್ಲಿ ಕೋವಿಡ್ ಹೆಚ್ಚಳ: ತುಂಬಿದ ಸ್ಮಶಾನಗಳು, ಸಿಬ್ಬಂದಿ ಹೈರಾಣ
ಕೋವಿಡ್ ತೀವ್ರಗೊಂಡಿರುವ ಚೀನಾದಲ್ಲಿ ಚಿತಾಗಾರಗಳಿಗೆ ಬರುತ್ತಿರುವ ಮೃತದೇಹಗಳ ಸಂಖ್ಯೆಯೂ ಹೆಚ್ಚಿದ್ದು, ಅಲ್ಲಿನ ಸಿಬ್ಬಂದಿ ಹೈರಾಣಾಗಿದ್ದಾರೆ.
ಚೀನಾದಲ್ಲಿ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಕೋವಿಡ್ ಲಾಕ್‌ಡೌನ್, ಪ್ರತ್ಯೇಕ ವಾಸ ಮತ್ತು ಸಾಮೂಹಿಕ ಪರೀಕ್ಷೆ ನಿಯಮಾವಳಿಗಳನ್ನು ಕಳೆದ ತಿಂಗಳಷ್ಟೇ ಹಿಂಪಡೆಯಲಾಗಿತ್ತು ಆ ಬಳಿಕ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿಹೋಗಿವೆ. ಫಾರ್ಮಸಿಗಳಲ್ಲಿ ಔಷಧಿಗಳ ಕೊರತೆ ಉಂಟಾಗಿದೆ.
3 ಕೋಟಿ ಜನಸಂಖ್ಯೆ ಇರುವ ಚೊಂಕಿಂಗ್ ನಗರದಲ್ಲಿ ಸಾಧಾರಣ ಕೋವಿಡ್ ರೋಗಲಕ್ಷಣಗಳಿರುವ ಜನರಿಗೆ ಕೆಲಸಕ್ಕೆ ಹೋಗುವಂತೆ ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ. ಈ ಮಧ್ಯೆ, ಅಲ್ಲಿ ಕೋವಿಡ್ ಸಂಖ್ಯೆ ಹೆಚ್ಚಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚಿದೆ. ಮೃತದೇಹಗಳನ್ನು ಇರಿಸಿಕೊಳ್ಳಲು ಸ್ಥಳದ ಕೊರತೆ ಉಂಟಾಗಿದೆ ಎಂದು ನಗರದ ಒಂದು ಚಿತಾಗಾರ ಹೇಳಿದೆ.