ನವದೆಹಲಿ: ಪ್ರಯಾಣಿಕರು ಆಯ್ದುಕೊಂಡ ವರ್ಗವನ್ನು ಅದಕ್ಕಿಂತ ಕಡಿಮೆ ದರ್ಜೆಗೆ ಸ್ವಯಂಚಾಲಿತವಾಗಿ ವಿಮಾನಸಂಸ್ಥೆಯೇ ಬದಲಾಯಿಸಿದ ಸಂದರ್ಭದಲ್ಲಿ, ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಇಂಥ ನಿಯಮಗಳನ್ನು ಸಿದ್ಧಪಡಿಸುತ್ತಿದೆ ಎಂದು ನಿರ್ದೇಶನಾಲಯದ ಮೂಲಗಳು ಹೇಳಿವೆ.
ಇಂಥ ನಿಯಮಗಳು ಜಾರಿಗೆ ಬಂದಿದ್ದೇ ಆದಲ್ಲಿ, ತೆರಿಗೆಗಳು ಸೇರಿದಂತೆ ಟಿಕೆಟ್‌ನ ಹಣವನ್ನು ಸಂತ್ರಸ್ತ ಪ್ರಯಾಣಿಕನಿಗೆ ಸಂಬಂಧಿಸಿದ ವಿಮಾನಯಾನ ಸಂಸ್ಥೆ ಸಂಪೂರ್ಣವಾಗಿ ಮರುಪಾವತಿಸಬೇಕಾಗುತ್ತದೆ. ಅಲ್ಲದೇ, ನಂತರ ಲಭ್ಯವಿರುವ ವರ್ಗದಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಡಿಜಿಸಿಎ ಮೂಲಗಳು ಹೇಳಿವೆ.
ನಿರ್ದಿಷ್ಟ ವರ್ಗದ ಟಿಕೆಟ್ ಕಾಯ್ದಿರಿಸಿದ ನಂತರವೂ ವಿಮಾನಸಂಸ್ಥೆಯು ತಮ್ಮ ಪ್ರಯಾಣದ ವರ್ಗವನ್ನು ಬದಲಾಯಿಸುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ತರಲು ಡಿಜಿಸಿಎ ಮುಂದಾಗಿದೆ ಎಂದು ಮೂಲಗಳು ಹೇಳಿವೆ.