ನೀವು ಕಾಡು ಜೇನು ತುಪ್ಪ ಟೇಸ್ಟ್ ಮಾಡಿದ್ದೀರಾ? ಈ ಜೇನು ತುಪ್ಪ ಸಾಮಾನ್ಯವಾಗಿ ಸಿಗುವ ಜೇನು ತುಪ್ಪಗಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುವುದು ಗೊತ್ತೇ? ಕಾಡು ಜೇನು ಇತರ ಜೇನುಗಿಂತ ಏಕೆ ಹೆಚ್ಚು ಆರೋಗ್ಯಕರ? ಎಂಬೆಲ್ಲಾ ಮಾಹಿತಿ ತಿಳಿಯೋಣ:
ಕಾಡು ಜೇನು ಹಾಗೂ ಸಾಮಾನ್ಯವಾಗಿ ಸಿಗುವ ಎರಡೂ ಜೇನನ್ನು ಜೇನು ಹುಳಗಳೇ ತಯಾರಿಸುವುದು. ಆದರೆ ಸಾಮಾನ್ಯವಾಗಿ ಸಿಗುವ ಜೇನಿಗಿಂತ ಕಾಡುಜೇನು ತುಂಬಾನೇ ಆರೋಗ್ಯಕರ. ಏಕೆಂದರೆ ಕಾಡುಜೇನಿನಲ್ಲಿ ಪೋಷಕಾಶಗಳು ಅಧಿಕ ಇರುತ್ತವೆ. ಏಕೆಂದರೆ ಕಾಡು ಜೇನು ನೊಣಗಳಿಗೆ ಕಾಡಿನಲ್ಲಿ ಹಲವಾರು ಔಷಧೀಯ ಗಿಡಗಳ ಹೂವಿನ ರಸ ಸಿಗುತ್ತದೆ, ಅವುಗಳನ್ನು ಸಂಗ್ರಹಿಸಿ ಜೇನು ತಯಾರಿಸುತ್ತದೆ, ಹೀಗಾಗಿ ಕಾಡಿನ ಜೇನಿನಲ್ಲಿ ಪೋಷಕಾಂಶಗಳು ತುಂಬಾನೇ ಅಧಿಕವಾಗಿರುತ್ತದೆ.
ಕಾಡು ಜೇನಿನಲ್ಲಿರುವ ಪೋಷಕಾಂಶಗಳು
ಕಾಡುಜೇನಿನಲ್ಲಿ ಸಾಮಾನ್ಯವಾಗಿ 22 ಅಮೈನೋ ಆಮ್ಲ, 31 ಭಿನ್ನ ಖನಿಜಾಂಶಗಳು ಹಾಗೂ ಅನೇಕ ಬಗೆಯ ವಿಟಮಿನ್ಸ್ ಇರುತ್ತವೆ. ಅಲ್ಲದೆ ಕಾಡು ಜೇನಿನಲ್ಲಿ ಮಾತ್ರ 30 ಬಗೆಯ ಬಯೋಆಕ್ಟಿವ್ ಸಸ್ಯಗಳ ಅಂಶಗಳಿರುತ್ತದೆ. ಅಲ್ಲದೆ ಇದರಲ್ಲಿ ಪಾಲಿಫೀನೋಲ್ಸ್ ಎಂಬ antioxidants ಇರುತ್ತದೆ. ಈ ಆ್ಯಂಟಿಆಕ್ಸಿಡೆಂಟ್ ಹೃದಯಾಘಾತ, ಕ್ಯಾನ್ಸರ್ ಈ ಬಗೆಯ ಕಾಯಿಲೆ ತಡೆಗಟ್ಟುವ ಔಷಧೀಯ ಗುಣವನ್ನು ಹೊಂದಿದೆ.
ಈ ಜೇನಿನಲ್ಲಿರುವ ಪೋಷಕಾಂಶಗಳು
ಕ್ಯಾಲ್ಸಿಯಂ
ಮೆಗ್ನಿಷ್ಯಿಯಂ
ಮ್ಯಾಂಗನೀಸ್
ನಿಯಾಸಿನ್
ಪ್ಯಾಂಥೋನಿಕ್ ಆಮ್ಲ
ರಂಜಕ
ಪೊಟಾಷ್ಯಿಯಂ
ಸತು
ರಿಬೋಫ್ಲೇವಿನ್
ಕಾಡು ಜೇನಿನ ಪ್ರಯೋಜನಗಳು
* ಗಾಯವನ್ನು ಒಣಗಿಸುತ್ತದೆ. ಸುಟ್ಟ ಗಾಯದ ಚಿಕಿತ್ಸೆಯಲ್ಲಿ ಜೇನು ಬಳಸಲಾಗುವುದು.
* ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
* ಕೆಮ್ಮು, ಶೀತಕ್ಕೆ ಅತ್ಯುತ್ತಮವಾದ ಮನೆಮದ್ದು
* ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಸಾಮಾನ್ಯ ಜೇನಿನಲ್ಲಿ ಸಕ್ಕರೆಯಂಶ ಇರಬಹುದು
ಜೇನು ಕೃಷಿ ಮಾಡುವವರು ಕೆಲವೊಂದು ಸೀಸನ್‌ನಲ್ಲಿ (ಮಳೆಗಾಲ) ಜೇನುನೊಣಗಳಿಗೆ ಸಕ್ಕರೆ ನೀರು ಮಾಡಿ ಅವುಗಳಿಗೆ ಸೇವಿಸಲು ನೀಡಲಾಗುವುದು. ಅಲ್ಲದೆ ಈ ಜೇನು ನೊಣಗಳಿಗೆ ಕಾಡು ಜೇನು ನೊಣಗಳಿಗೆ ಸಿಗುವಷ್ಟು ಬಗೆ ಬಗೆಯ ಹೂಗಳ ರಸ ಸಿಗುವುದಿಲ್ಲ. ಆದ್ದರಿಂದ ಕಾಡುಜೇನು ಹೆಚ್ಚು ಆರೋಗ್ಯಕರ.
ಕಾಡುಜೇನು ಕೆಲವೊಮ್ಮೆ ಈ ಬಗೆಯ ಅಡ್ಡಪರಿಣಾಮ ಬೀರಬಹುದು:
ಕಾಡುಜೇನನ್ನು ಒಂದು ವರ್ಷದ ಕೆಳಗಿನ ಮಕ್ಕಳಿಗೆ ಕೊಡಬಾರದು ಎಂದು ಹೇಳಲಾಗುವುದು.
ಏಕೆಂದರೆ ಇದರಲ್ಲಿ (ಕ್ಲೋಸ್ಟ್ರಿಡಿಯಮ್ ಬೊಟುಲಿನಮ್) ಎಂಬ ಬ್ಯಾಕ್ಟಿರಿಯಾ ಇರುತ್ತದೆ,
ಇದು ಮಕ್ಕಳಿಗೆ ಒಳ್ಳೆಯದಲ್ಲ. ಕಾಡುಜೇನು ತಿಂದಾಗ ಬೇಧಿ, ವಾಂತಿ ಈ ಬಗೆಯ ಸಮಸ್ಯೆ ಕಂಡು
ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.
ಒಂದು ವರ್ಷದ ಕೆಳಗಿನ ಮಕ್ಕಳನ್ನು ಜೇನು ಕೊಟ್ಟರೆ ಈ ಅಪಾಯಗಳಿವೆ
* ಉಸಿರಾಟ ನಿಧಾನವಾಗುವುದು
* ಕುತ್ತಿಗೆ ನಿಯಂತ್ರಣದಲ್ಲಿ ಇರುವುದಿಲ್ಲ
* ಹಾಲು ಕುಡಿಯಲ್ಲ
* ಅಳಲೂ ಸಾಧ್ಯವಾಗಲ್ಲ
ಆದ್ದರಿಂದ ನೀವು ಒಂದು ವರ್ಷದ ಕೆಳಗಿನ ಮಕ್ಕಳಿಗೆ ಜೇನನ್ನು ನೀಡಲೇಬೇಡಿ.
ಕೆಲವರು ಕಾಡು ಜೇನು ಎಂದು ಮೋಸ ಮಾಡುತ್ತಾರೆ, ಜೇನಿನ ಶುದ್ಧತೆ ಕಂಡು ಹಿಡಿಯುವುದು ಹೇಗೆ?
ಹೆಬ್ಬರಳಿನಿಂದ ಪರೀಕ್ಷೆ ಮಾಡಿ: ಸ್ವಲ್ಪ ಜೇನನ್ನು ನಿಮ್ಮ ಹೆಬ್ಬರಳಿಗೆ ಹಾಕಿ, ಅದು ನೀರಿನಿಂತೆ ಹರಿದರೆ ಅದು ಶುದ್ಧವಾದ ಜೇನಲ್ಲ.
ನೀರಿನ ಪರೀಕ್ಷೆ: ಒಂದು ಲೋಟ ನೀರಿಗೆ ಒಂದು ಚಮಚ ಜೇನು ಹಾಕಿ, ಅದು ಹಾಕಿದಾಗ ನೀರಿನಲ್ಲಿ ಕರಗಿದರೆ ಶುದ್ಧ ಜೇನಲ್ಲ, ಶುದ್ಧ ಜೇನು ತಳದಲ್ಲಿ ಹೋಗಿ ನಿಲ್ಲುತ್ತೆ.
ವಿನೆಗರ್ ಪರೀಕ್ಷೆ: ಸ್ವಲ್ಪ ಜೇನನ್ನು ವಿನೆಗರ್ ಜೊತೆ ಮಿಕ್ಸ್ ಮಾಡಿದಾಗ ಜೇನಿನಲ್ಲಿ ನೊರೆ ಬಂದರೆ ಅದು ಶುದ್ಧ ಜೇನಲ್ಲ
ಬಿಸಿ ಮಾಡಿ ಪರೀಕ್ಷಿಸುವುದು: ಒಂದು ಬೆಂಕಿಕಡ್ಡಿ ತೆಗೆದು ಜೇನಿನಲ್ಲಿ ಅದ್ದಿ ಬೆಂಕಿಗೆ ಹಿಡಿಯಿರಿ, ಜೇನು ಉರಿಯುವುದಿಲ್ಲ, ಉರಿದರೆ ಅದು ಶುದ್ಧ ಜೇನಲ್ಲ.