ಬದಿಯಡ್ಕ: ಆರೋಗ್ಯಪೂರ್ಣ ಜೀವನಕ್ಕಾಗಿ ರಾಗಿ, ಜೋಳ, ಸಾಮೆ, ನವಣೆ ಮುಂತಾದ ಧಾನ್ಯಗಳ ಉಪಯೋಗವನ್ನು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸುವ ಕಾರ್ಯವಾಗಬೇಕು ಎಂದು ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಹೇಳಿದರು.
ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಿರಿಧಾನ್ಯ ಖಾದ್ಯಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ರಾಸಾಯನಿಕ ಯುಕ್ತ ಆಹಾರ-ವಿಹಾರಗಳ ಮಧ್ಯೆ ದೇಹಾರೋಗ್ಯ, ಸುದೃಢತೆ ಕಾಯ್ದುಕೊಳ್ಳುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಲಭ್ಯ ಆಹಾರಗಳಲ್ಲಿ ಹೆಚ್ಚು ಪೋಷಕಾಂಶವಿರುವ ಆಹಾರ ಕ್ರಮ ಅನುಸರಿಸುವುದು ಸೂಕ್ತ ಎಂದವರು ತಿಳಿಸಿದರು.
ಮುಖ್ಯ ಶಿಕ್ಷಕ ರಾಜಗೋಪಾಲ ಅವರು 2023 ವರ್ಷವನ್ನು ಸಿರಿಧಾನ್ಯ ವರ್ಷವೆಂದು ವಿಶ್ವ ಸಂಸ್ಥೆಯೂ ಆಚರಿಸುವ ಹಿನ್ನೆಲೆ ವಿವರಿಸಿದರು. ಉಪಾಧ್ಯಕ್ಷ ರಾಮ, ಸಮಿತಿಯ ಶರೀಫ್, ತಾಹಿರಾ, ಆಸ್ಯಮ್ಮ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀಧರನ್ ಸ್ವಾಗತಿಸಿ. ಶ್ರೀಧರ ಭಟ್ ವಂದಿಸಿದರು.
ಸುಮಾರು ಇನ್ನೂರಕ್ಕೂ ಹೆಚ್ಚಿನ ಮಕ್ಕಳಿಂದ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಧಾನ್ಯಗಳ ವೈವಿಧ್ಯಮಯ ತಿಂಡಿಗಳ ಪ್ರದರ್ಶನ, ವಿವರಣೆ ಎಲ್ಲರ ಮನಸೆಳೆಯಿತು. ಭಾರತವು 2018ರಲ್ಲಿ ಮಂಡಿಸಿದ ವಿವಿಧ ಪೌಷ್ಟಿಕ ಧಾನ್ಯಗಳ ಪರಿಚಯದ ಕಾರ್ಯಕ್ರಮವನ್ನು ವಿಶ್ವ ಸಂಸ್ಥೆ ಅನುಮೋದಿಸಿದ್ದು 90ಕ್ಕೂ ಹೆಚ್ಚಿನ ದೇಶಗಳ ಬೆಂಬಲದಿಂದ 2023 ನ್ನು ಸಿರಿಧಾನ್ಯ ವರ್ಷ ಘೋಷಿಸಲಾಗಿದೆ.ಈ ಪ್ರಯುಕ್ತ ವಿವಿಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.