ನವದೆಹಲಿ : ಚೀನಾದಲ್ಲಿ ಕೋವಿಡ್ ಪ್ರಕರಣ ಉಲ್ಬಣವಾಗುವ ಮೂಲಕ ಭಾರತದಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ Mansukh Mandaviya ಅವರು ಬುಧವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು ಅಧಿಕಾರಿಗಳು ಜಾಗರೂಕರಾಗಿರಬೇಕು ಹಾಗೂ ಕೋವಿಡ್ ಪ್ರಕರಣಗಳ ಜಾಡು ಹಿಡಿಯುವಂತೆ ಸೂಚಿಸಿದರು.
ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಕೇಂದ್ರ ಸರಕಾರ ಜನರಿಗೆ ಸಲಹೆ ನೀಡಿದೆ. ದೇಶದ ಕೋವಿಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ಸಭೆಗಳನ್ನು ನಡೆಸಲು ನಿರ್ಧರಿಸಿದೆ.
"ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ಹಾಗೂ ಕಣ್ಗಾವಲು ಹೆಚ್ಚಿಸಲು ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ'' ಎಂದು ಸಭೆಯ ನಂತರಸಚಿವರು ಟ್ವೀಟ್ ಮಾಡಿದ್ದಾರೆ.
'ಭಯಪಡುವ ಅಗತ್ಯವಿಲ್ಲ ಹಾಗೂ ಸಾಕಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮಾರ್ಗಸೂಚಿಗಳಲ್ಲಿ ಇನ್ನೂ ಯಾವುದೇ ಬದಲಾವಣೆ ಇಲ್ಲ'' ಎಂದು ಕೋವಿಡ್ ಕುರಿತ ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರಾಗಿರುವ NITI ಆಯೋಗದ ಸದಸ್ಯ ವಿ.ಕೆ. ಪಾಲ್ ಹೇಳಿದರು.