ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿ ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಮಾಸದ ಒಂದು ತಿಂಗಳ ಪರ್ಯಂತ ಜರಗುವ ಧನು ಪೂಜಾ ಮಹೋತ್ಸವಕ್ಕೆ ಶನಿವಾರ ಪ್ರಾತಃಕಾಲ ಭಕ್ತಿ ಪುರಸ್ಸರವಾಗಿ ಚಾಲನೆ ನೀಡಲಾಯಿತು. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅರುಣೋದಯದ ಸಂದರ್ಭ ಕ್ಷೇತ್ರ ಅರ್ಚಕರು ದೀಪಾರಾಧನೆ ಸಹಿತ ಪೂಜಾ ವಿಧಾನಗಳನ್ನು ನೇರೆವೇರಿಸಿದರು. ಊರ ಹಾಗೂ ಪರವೂರ ನೂರಾರು ಜನ ಆಸ್ತಿಕ ವರ್ಗ ಪ್ರಾತಃಕಾಲದ ಈ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾದರು.
ಈ ಸಂದರ್ಭದಲ್ಲಿ ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ಹಾಗೂ ಬಳಗದವರಿಂದ ರುದ್ರ ಪಾರಾಯಣ ಜರಗಿತು. ಕ್ಷೇತ್ರ ಆಡಳಿತ ಹಾಗೂ ಸೇವಾ ಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿ ನೇತೃತ್ವದಲ್ಲಿ ವಿವಿಧ ಉಪ ಸಮಿತಿಗಳ ಸಹಕಾರದಲ್ಲಿ ಒಂದು ತಿಂಗಳ ಕಾಲ ಧನುಪೂಜಾ ಮಹೋತ್ಸವದ ಯಶಸ್ವಿಗೆ ಸರ್ವ ಸಜ್ಜುಗೊಳಿಸಲಾಗಿದೆ. ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಮಯ್ಯ, ಧನು ಪೂಜಾ ಸ್ವಾಗತ ಸಮಿತಿಯ ಡಿ.ದಾಮೋದರ, ಶಂಕರ ರೈ ಮಾಸ್ತರ್, ರಾಜೇಂದ್ರ ರೈ ಡಿ, ತಿಮ್ಮಣ್ಣ ರೈ ನೈಮುಗೇರು, ಡಿ.ಎನ್.ರಾಧಾಕೃಷ್ಣ, ಆನಂದ ಎಂ.ಕೆ, ಶಿವಪ್ಪ ರೈ,ಎ.ಡಿ. ಕೊರಗಪ್ಪ ,ಸುರೇಂದ್ರ ರೈ ಕಮ್ಮಂತಿಲ, ಕೇಶವ ಡಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಪ್ರಾತಃಕಾಲ ಭಜನೆ, ಹರಿಕಥಾ ಸತ್ಸಂಗ, ದಾಸ ಸಂಕೀರ್ತನೆ ಇನ್ನಿತರ ಭಕ್ತಿ ಶ್ರದ್ಧಾ ಕಾರ್ಯದೊಂದಿಗೆ ಬೆಳಗ್ಗಿನ ಲಘ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.