ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ವಿಡಿಯೋ ಹಾಡು ಕಳೆದ ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನ ಕೊನೆಯಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದಾರೆ.
ಈ ಸನ್ನಿವೇಶ ಹಾಗೂ ಹಾಡಿಗೆ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದು ಹೆಸರಿಟ್ಟಿರುವುದು ಕೆಲವರನ್ನು ಕೆರಳಿಸಿದೆ. ಈ ಕುರಿತು ಮಾತನಾಡಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ‘ಶಾರುಖ್ ಖಾನ್ ಅವರ ಪಠಾಣ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಬೇಷರಮ್ ರಂಗ್ ಎಂದು ವಿಡಂಬನೆ ಮಾಡಿದ್ದಾರೆ. ಇದು ತೀವ್ರ ಖಂಡನಾರ್ಹ. ದೃಶ್ಯಕ್ಕೆ ಕತ್ತರಿ ಹಾಕದಿದ್ದರೇ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಪ್ರದರ್ಶನಗೊಳ್ಳಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ನರೋತ್ತಮ್ ಮಿಶ್ರಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿರುವ ನಟ ಪ್ರಕಾಶ್ ರಾಜ್, ಇನ್ನೂ ಎಷ್ಟುದಿನ ನಾವು ಇಂತಹ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು? ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ‘ಇಂತಹವರದ್ದು ಬಣ್ಣದ ಕುರುಡು’ ಎಂದು ವ್ಯಂಗ್ಯವಾಡಿದ್ದಾರೆ.
ಅಶ್ಲೀಲತೆ ಬೇಷರಮ್ ಹಾಡಿನಲ್ಲಿ ತುಂಬಿ ತುಳಕುತ್ತಿದೆ. ದೀಪಿಕಾ ಪಡುಕೋಣೆ ನಿರ್ಲಜ್ಜೆಯಿಂದ ತುಂಡು ಬಟ್ಟೆ ಹಾಕಿ ಮೈ ಬಳುಕಿಸಿದ್ದಾರೆ. ಇದು ಹಿಂದೂ ಸಂಸ್ಕೃತಿಗೆ ವಿರುದ್ಧ’ ಎಂದು ಟ್ವಿಟರ್‌ನಲ್ಲಿ ಕೆಲವರು ಕಿಡಿಕಾರಿದ್ದಾರೆ.