ದೌಸಾ: 'ರಾಜಸ್ಥಾನದಲ್ಲಿನ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಲಿದೆ. ರಾಜ್ಯದಲ್ಲಿ ಪಕ್ಷ ಒಗ್ಗಟ್ಟಾಗಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಯುವ ಮುಖಂಡ ಸಚಿನ್ ಪೈಲಟ್ ನಡುವೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಆಶಯ ವ್ಯಕ್ತಪಡಿಸಿದ್ದಾರೆ.
'ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಮರ್ಥ್ಯ ತೋರಲಿದೆ. ನಮಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ದೊರೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯು ರಾಜಸ್ಥಾನ ಪ್ರವೇಶಿಸುವ ಮುನ್ನ ಗೆಹಲೋತ್ ಹಾಗೂ ಪೈಲಟ್ ನಡುವಣ ಭಿನ್ನಮತ ಸ್ಫೋಟಗೊಂಡಿತ್ತು. ವೇಣುಗೋಪಾಲ್ ಅವರ ಮಧ್ಯಪ್ರವೇಶದಿಂದಾಗಿ ಇಬ್ಬರ ನಡುವಣ ತಿಕ್ಕಾಟವು ಅಲ್ಪಮಟ್ಟಿಗೆ ಶಮನಗೊಂಡಿತ್ತು. ವೇಣುಗೋಪಾಲ್, ಪೈಲಟ್ ಹಾಗೂ ಗೆಹಲೋತ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಧ್ಯಮಗಳ ಎದುರು ಒಗ್ಗಟ್ಟು ಪ್ರದರ್ಶಿಸಿದ್ದರು.