ತಿರುವನಂತಪುರ: ರಾಜ್ಯದ 14 ವಿಶ್ವವಿದ್ಯಾಲಯಗಳ ಕುಲಾಧಿಪತಿ ಸ್ಥಾನದಿಂದ ರಾಜ್ಯಪಾಲರನ್ನು ತೆರವುಗೊಳಿಸಿ, ಅಲ್ಲಿಗೆ ಶಿಕ್ಷಣ ತಜ್ಞರನ್ನು ನೇಮಕಗೊಳಿಸುವ ನಿಟ್ಟಿನಲ್ಲಿ ಕೇರಳ ವಿಧಾನಸಭೆಯು ಈಚೆಗೆ ಅಂಗೀಕರಿಸಿದ್ದ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕಾನೂನು ಪರಿಶೀಲನೆಗೆ ಕೋರುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಶಿಕ್ಷಣವು ರಾಜ್ಯ ಮತ್ತು ಕೇಂದ್ರಕ್ಕೆ ಅಧಿಕಾರವಿರುವ ವಿಷಯವಾಗಿರುವುದರಿಂದ ರಾಜ್ಯವು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಅಥವಾ ಕೇಂದ್ರದ ಒಪ್ಪಿಗೆಯ ಅಗತ್ಯವಿದೆಯೇ ಎನ್ನುವ ಬಗ್ಗೆ ರಾಜ್ಯಪಾಲರು ಮಸೂದೆಯ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಹಿಂದೆ, ಕೇರಳ ಸರ್ಕಾರವು ರಾಜ್ಯಪಾಲರನ್ನು ಕುಲಾಧಿಪತಿಯ ಹುದ್ದೆಯಿಂದ ತೆಗೆದುಹಾಕುವ ಸುಗ್ರೀವಾಜ್ಞೆ ಹೊರಡಿಸಿದಾಗ, ರಾಜ್ಯಪಾಲರನ್ನು ಒಳಗೊಂಡಿರುವ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅನುಚಿತವಾಗಿದ್ದು, ಈ ವಿಷಯವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವುದಾಗಿ ಖಾನ್ ಅವರು ಪ್ರತಿಪಾದಿಸಿದ್ದರು. ಹಾಗಾಗಿ, ರಾಜ್ಯಪಾಲjರು ಮಸೂದೆಯನ್ನು ರಾಷ್ಟ್ರಪತಿಗಳಿಗೂ ಕಳುಹಿಸಬಹುದು ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ರಾಜ್ಯ ಸರ್ಕಾರದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ, ಸಿಪಿಎಂ ನೇತೃತ್ವದ ಸರ್ಕಾರವು ರಾಜ್ಯಪಾಲರನ್ನು ಕುಲಾಧಿಪತಿ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ.