ಮಥುರಾ: ಮಹತ್ವದ ಬೆಳವಣಿಗೆಯಲ್ಲಿ ಜ್ಞಾನವಾಪಿ ಮಾದರಿಯಂತೆ ಕೃಷ್ಣ ಜನ್ಮಸ್ಥಳದ ಸರ್ವೆಗೆ ಮಥುರಾ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಜ.20ರಂದು ಸರ್ವೆ ವರದಿ ಸಲ್ಲಿಸಲು ಮಥುರಾ ಕೋರ್ಟ್ ಆದೇಶಿಸಿದೆ.
ಮಥುರಾದಲ್ಲಿರುವ ಕೃಷ್ಣ ದೇಗುಲ (Mathura Krishna Temple) ಸಮೀಕ್ಷೆಗೆ (Survey) ಮಥುರಾ ಹೈಕೋರ್ಟ್ ಆದೇಶ ನೀಡಿದ್ದು, ಜ.20ರಂದು ಸರ್ವೆ ವರದಿ ಸಲ್ಲಿಸಲು ಮಥುರಾ ಕೋರ್ಟ್ ಆದೇಶ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ಮಾಡಲು ಆದೇಶ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಈ ಬಗ್ಗೆ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದೆ.
ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಲಾಗಿದ್ದು, ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿಯೇ ಶಾಹಿ ಈದ್ಗಾ ಮಸೀದಿಯೂ ಇದೆ. ಶಾಹಿ ಈದ್ಗಾ ಮಸೀದಿ ಇರುವ ಸ್ಥಳದಲ್ಲಿಯೇ ಶ್ರೀಕೃಷ್ಣನ ಪುರಾತನ ದೇಗುಲವೂ ಇತ್ತು. ಶ್ರೀಕೃಷ್ಣನ ಜನ್ಮಭೂಮಿಯ ಗರ್ಭಗೃಹದ ಮೇಲೆಯೇ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗೆ ಪ್ರವೇಶಿಸಿ ಅಭಿಷೇಕ ನಡೆಸಲು ಅವಕಾಶ ನೀಡಬೇಕು ಎಂದು ಹಿಂದೂ ಮಹಾಸಭಾಗದ ಖಜಾಂಚಿ ದಿನೇಶ್ ಶರ್ಮಾ ವಿನಂತಿಸಿದ್ದರು.
ಅವರು ಮೊದಲು ತಮ್ಮ ಖಡ್ಗದ ಬಲದಿಂದ ದಾಳಿ ನಡೆಸಿದರು. ಆದರೆ ಈಗ ನಾವು ನಮ್ಮ ಪುರಾತನ ಪರಂಪರೆಯನ್ನು ಮರಳಿ ಪಡೆಯಲು ಇಚ್ಛಿಸುತ್ತಿದ್ದೇವೆ. ಈ ಮಸೀದಿಯನ್ನು ತೆರವುಗೊಳಿಸಿ, ಹಿಂದೂಗಳ ಆತ್ಮಗೌರವಕ್ಕೆ ಮನ್ನಣೆ ನೀಡಬೇಕು’ ಎಂದು ಅವರು ಕೋರಿದ್ದರು. ನಂತರ ನ್ಯಾಯಲಯವು ಈ ಪ್ರಕರಣದ ತೀರ್ಪನ್ನು ಮೇ 31 ಮುಂದೂಡಿತ್ತು. ಆದರೆ ಇದೀಗ ಮಥುರಾ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಮಥುರಾದಲ್ಲಿರುವ ಕೃಷ್ಣ ದೇಗುಲ ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಆದೇಶವನ್ನು ನೀಡಿದೆ.
ಹಿಂದೂಗಳ ವಾದವೇನು?
ಶ್ರೀಕೃಷ್ಣ ದೇವಾಲಯಕ್ಕೆ ಸೇರಿದ್ದು ಎನ್ನುವ 13.37 ಎಕರೆ ಭೂಮಿಯನ್ನು ಸಂಪೂರ್ಣವಾಗಿ
ಹಿಂದೂಗಳಿಗೆ ನೀಡಬೇಕು ಎನ್ನುವುದು ಹಿಂದೂ ಮಹಾಸಭಾದ ವಿನಂತಿ. ಈ ಭೂಮಿಯಲ್ಲಿಯೇ ಶಾಹಿ
ಈದ್ಗಾ ಮಸೀದಿಯೂ ಇದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿ ಕುರಿತು
ಪ್ರತಿಕ್ರಿಯಿಸಿದ್ದ ಶಾಹಿ ಈದ್ಗಾ ಮಸೀದಿ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್,
1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಎಲ್ಲರೂ ಗೌರವಿಸಬೇಕು. ಮಥುರಾದಲ್ಲಿ ಗೋಡೆಯ ಒಂದು
ಬದಿಗೆ ಕೃಷ್ಣನ ಆಲಯವಿದ್ದರೆ, ಮತ್ತೊಂದು ಬದಿಗೆ ಮಸೀದಿಯಿದೆ. ಬಹುಕಾಲದಿಂದ ಇದು ಹೀಗೆಯೇ
ನಡೆದುಕೊಂಡು ಬಂದಿದೆ. ಯಾರಿಗೂ ಇದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ’ ಎಂದು
ಹೇಳಿದ್ದರು.
ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿವಾದ ದೇಶದ ಗಮನ ಸೆಳೆದಿರುವ ಬೆನ್ನಲ್ಲೇ ಮಥುರದಲ್ಲಿಯೂ ಬಹುಕಾಲದ ವಿವಾದ ಮತ್ತೆ ಗರಿಗೆದರಿತ್ತು.