ನವದೆಹಲಿ:1984ರ ಭೋಪಾಲ್ ವಿಷಾನಿಲ ದುರಂತ ಸಂಭವಿಸಿದ ಸ್ಥಳದಲ್ಲಿ ಟನ್‌ಗಟ್ಟಲೆ ಪ್ರಮಾಣದ ಅಪಾಯಕಾರಿ ತ್ಯಾಜ್ಯ ಸಂಗ್ರಹವಿದ್ದು, ಅದರ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಅಂತರ್ಜಲ ಹಾಗೂ ಮಣ್ಣು ಕಲುಷಿತಗೊಳ್ಳುತ್ತಿದೆ, ಇದು ಈ ದುರಂತದಲ್ಲಿ ಬದುಕುಳಿದವರ ಹಾಗೂ ಸ್ಥಳೀಯರ ಆರೋಗ್ಯದ ಹಕ್ಕಿನ ಮೇಲೆ ನಡೆಯುತ್ತಿರುವ ನೇರ ದೌರ್ಜನ್ಯವಾಗಿದೆ ಎಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ದ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಅರುಣ್ ಕುಮಾರ್ ಮಿಶ್ರಾ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಮಾನವಹಕ್ಕುಗಳ
ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ''ಜಾಗತೀಕರಣದ ಪರಿಣಾಮವಾಗಿ
ಸಂಪತ್ತು ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಕೆಲವೇ ಕೆಲವು ರಾಷ್ಟ್ರಗಳಲ್ಲಿ
ಶೇಖರಗೊಳ್ಳುತ್ತಿದೆ''ಯೆಂದು ಹೇಳಿದರು.
''ಕೈಗಾರಿಕಾ ದುರಂತಗಳಿಂದ ಉಂಟಾಗುವ
ವಿಪತ್ತುಗಳ ಸಂದರ್ಭದಲ್ಲಿ ಬಹುರಾಷ್ಟ್ರೀಯ ಉದ್ಯಮಗಳ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ
ವ್ಯಾಖ್ಯಾನಿಸಲಾಗಿದೆ'' ಎಂದು ಎನ್‌ಎಚ್‌ಆರ್‌ಸಿ ವರಿಷ್ಠರು ಪ್ರತಿಪಾದಿಸಿದ್ದಾರೆ.
1984ರಲ್ಲಿ ಭೋಪಾಲ್‌ನಲ್ಲಿ ಬಹುರಾಷ್ಟ್ರೀಯ ಕಂಪೆನಿ ಯೂನಿಯನ್ ಕಾರ್ಬೈಡ್‌ನ ಕಾರ್ಖಾನೆಯಲ್ಲಿ ಸಂಭವಿಸಿದ ವಿಷಾನಿಲ ದುರಂತವು ಜಗತ್ತಿನ ಅತ್ಯಂತ ಘೋರವಾದ ಕೈಗಾರಿಕಾ ದುರಂತಗಳಲ್ಲೊಂದೆಂದು ಪರಿಗಣಿಸಲ್ಪಟ್ಟಿದೆ. ಈ ದುರಂತಕ್ಕಾಗಿ ಯೂನಿಯನ್ ಕಾರ್ಬೈಡ್ ಸಂಸ್ಥೆಯು ಜಾಗತಿಕವಾಗಿ ಭಾರೀ ಖಂಡನೆಗೊಳಗಾಗಿತ್ತು.
ಭೋಪಾಲ್ ವಿಷಾನಿಲ ದುರಂತದಲ್ಲಿ ಅಂದಾಜು 3 ಸಾವಿರ ಮಂದಿ ಸಾವನ್ನಪ್ಪಿದ್ದರು. ದುರಂತದ ಸಂಭವಿಸಿದ ನಿವೇಶನದ ಒಡೆತನವು ಬದಲಾಗಿದೆ. ದುರಂತ ಸಂಭವಿಸಿದ ಕಾರ್ಖಾನೆಯ ಆವರಣದಲ್ಲಿ ಈಗಲೂ 336 ಟನ್ ಅಪಾಯಕಾರಿ ತ್ಯಾಜ್ಯ ಬಿದ್ದುಕೊಂಡಿದೆ ಎಂದವರು ಹೇಳಿದರು.