ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಮಾರ್ಚ್ ತಿಂಗಳಿನಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮಹಿಳಾ ಪಡೆ ಕೂಡಾ ಸೇರ್ಪಡೆಯಾಗಲಿದೆ.
ಪುರುಷರ ಪಡೆಗೆ ಸಮಾನವಾಗಿ ಮಹಿಳಾ ಪಡೆಗೂ ತರಬೇತಿ ನೀಡಲಾಗುತ್ತದೆ.
ಪ್ರಸ್ತುತ ನಾಲ್ಕರಿಂದ ಆರು ವಾರ ಅವಧಿಯ ತರಬೇತಿಯೂ ಪ್ರಗತಿಯಲ್ಲಿದೆ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿ ಚಾರು ಸಿನ್ಹಾ ಅವರು ತಿಳಿಸಿದ್ದಾರೆ.
ತರಬೇತಿ ಬಳಿಕ ಕಣಿವೆ ರಾಜ್ಯದ ವಿವಿಧೆಡೆ ನಿಯೋಜಿಸಲಾಗುತ್ತದೆ. ಮೊದಲಿಗೆ ಸೀಮಿತ ಸಂಖ್ಯೆಯ ಮಹಿಳಾ ಯೋಧರಿರುವರು. ಕಾರ್ಯಾಚರಣೆ ವೇಳೆ ನಾವು ಸುರಕ್ಷಿತ ಎಂಬ ಭಾವನೆ ಸ್ಥಳೀಯ ಮಹಿಳೆಯರಿಗೆ ಇರಬೇಕು ಎಂಬುದು ಇದರ ಉದ್ದೇಶ ಎಂದರು.
ಕಾಶ್ಮೀರದಲ್ಲಿ ಜನ ಜೀವನವನ್ನು ಸಹಜಸ್ಥಿತಿಗೆ ತರುವುದು ನಮ್ಮ ಉದ್ದೇಶ. ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್‌ನ ಯೋಧರು ಯಾವುದೇ ಮನೆಗೆ ಪ್ರವೇಶಿಸುವಂತಿರಬೇಕು. ಯಾವುದೇ ರೀತಿಯಲ್ಲಿ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಆಗಬಾರದು ಎಂದು 1996ನೇ ತಂಡದ, ತೆಲಂಗಾಣ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಅವರು ಹೇಳಿದರು.
ಆರು ತಿಂಗಳ ಹಿಂದೆ ಇಂಥದೊಂದು ಪ್ರಯೋಗ ನಡೆದಿದೆ. ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ಆರು ತಿಂಗಳು ಕೆಲಸ ಮಾಡಿದ್ದಾರೆ. ಉತ್ತಮವಾಗಿ ಮಾಡಿದ್ದಾರೆ. ಪೈಲಟ್ ಯೋಜನೆ ಯಶಸ್ವಿಯಾದ ನಂತರ ಇದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.